ಯುರೋಪ್
ಜಗತ್ತಿನ ಆರು ಭೂಖಂಡಗಳಲ್ಲಿ ಒಂದು ಮತ್ತು ಅಟ್ಲಾಂಟಿಕ್ ಸಾಗರದಲ್ಲಿ ಚಾಚಿಕೊಂಡಿರುವ ಒಂದು ದೊಡ್ಡ ಪರ್ಯಾಯ ದ್ವೀಪ. 

ಸನ್ನಿವೇಶ ಮತ್ತು ವಿಸ್ತೀರ್ಣ: ಈ ಖಂಡದಲ್ಲಿರುವ ಸ್ಕಾಂಡಿನೇವಿಯ, ಪೋರ್ಚುಗಲ್, ಸ್ಪೇನ್, ಇಟಲಿ, ಮುಂತಾದವೂ ಪರ್ಯಾಯ ದ್ವೀಪಗಳಾಗಿವೆ. ಯುರೋಪಿನ ತೀರಪ್ರದೇಶ ಬಹು ಅಂಕುಡೊಂಕಿನಿಂದ ಕೂಡಿದ್ದು ಸು. 60,973ಕಿ.ಮೀ ಉದ್ದವಿದೆ. ಯುರೋಪ್ ಖಂಡ 360 ಉತ್ತರ ಅಕ್ಷಾಂಶದಿಂದ 710 ಉತ್ತರ ಅಕ್ಷಾಂಶಗಳವರೆಗೂ ಮತ್ತು 10.0 27' ಪಶ್ಚಿಮ ರೇಖಾಂಶದಿಂದ 570 ಪೂರ್ವ ರೇಖಾಂಶಗಳವರೆಗೂ ಹರಡಿದೆ. ಕಾರ, ಬೇರೆಂಟ್ಸ್ ಮತ್ತು ಹ್ವೈಟ್ ಸಮುದ್ರಗಳನ್ನೊಳಗೊಂಡ ಇದರ ಉತ್ತರದಲ್ಲಿ ಆರ್ಕ್‍ಟಿಕ್ ಸಾಗರ, ದಕ್ಷಿಣದಲ್ಲಿ ಮೆಡಿಟೇರಿಯನ್ ಏಜಿಯನ್ ಮತ್ತು ಏಡ್ರಿಯಾಟಿಕ್ ಸಮುದ್ರಗಳು ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರ, ಆಗ್ನೇಯದಲ್ಲಿ ಕಪ್ಪು ಸಮುದ್ರ, ಪೂರ್ವಕ್ಕೆ ಕ್ಯಾಸ್ಟಿಯನ್ ಸಮುದ್ರ. ಕಾಕಸಸ್ ಮತ್ತು ಯೂರಲ್ ಪರ್ವತ ಶ್ರೇಣಿಗಳು ಈ ಖಂಡವನ್ನು ಸುತ್ತುವರಿದಿದೆ. ಇವುಗಳಲ್ಲದೆ ಅನೇಕ ಆಖಾತಗಳು, ಅಳಿವೆಗಳು, ಭೂಕಂಠಗಳು. ಜಲಸಂಧಿಗಳು ಇಲ್ಲಿವೆ. ಇದರ ಒಟ್ಟು ಭೌಗೋಳಿಕ ಪ್ರದೇಶ ಸುಮಾರು, 10,458,000 ಚ.ಕಿ.ಮೀ.ಗಳು. ಇದು ಪ್ರಪಂಚದ ಒಟ್ಟು ವಿಸ್ತೀರ್ಣದಲ್ಲಿ ಶೇ. 7ರಷ್ಟಿದೆ. ಜನಸಂಖ್ಯೆ 703,400,000 (2000). ಇದರ ಬಹುಭಾಗ ಸಮಶೀತೋಷ್ಣವಲಯದಲ್ಲಿದ್ದು ಸಾಗರ, ಸಮುದ್ರಗಳ ಪ್ರಭಾವದಿಂದಾಗಿ ಹಿತಕರ ಹವೆಯಿಂದಾಗಿ ಜನವಸತಿಗೆ ತುಂಬ ಅನುಕೂಲವಾಗಿದೆ. ಯುರೋಪ್ ಪದದ ಮೂಲ ಅಕ್ಕಾಡಿಯನ್ ಭಾಷೆಯ `ಏರಬ್ ಅಂದರೆ ಸೂರ್ಯ ಮುಳುಗುವ ಪ್ರದೇಶವೆಂದರ್ಥ. ಜಗತ್ತಿನಲ್ಲಿ ಮತ್ತೆಲ್ಲೂ ಕಾಣಲಾರದಷ್ಟು ವೈವಿಧ್ಯಮಯ ಮಾನವ ಚಟುವಟಿಕೆಗಳು ನಿರಂತರವಾಗಿ ನಡೆದದ್ದು ಇಲ್ಲಿಯೆ. ಯುರೋಪಿನ ಮಹಾನ್ ಲೇಖಕ ಮಾರ್ಲೋ ಇದನ್ನು ಅಪರಿಮತವಾದ ಸಂಪನ್ಮೂಲಗಳು ಅಡಕವಾಗಿರುವ ಒಂದು ಕೊಠಡಿ ಎಂದು ಹೇಳಿದ್ದಾರೆ. ಅತ್ಯಾಧುನಿಕ ಕೈಗಾರಿಕೆಗಳ ಹಾಗೂ ಅಂತಾರಾಷ್ಟ್ರೀಯ ವ್ಯಾಪಾರ ವಾಣಿಜ್ಯ ಕ್ರಾಂತಿಯ ಅಂಕುರಾರ್ಪಣವಾದದು ಇಲ್ಲೇ. ಯುರೋಪಿನಲ್ಲಿ ಜನ್ಮತಾಳಿದ ಸಾಂಸ್ಕøತಿಕ, ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಗಳು ಇಂದು ಜಗತ್ತಿನ ಎಲ್ಲಾ ಭಾಗಗಳಲ್ಲಿ ಹರಡಿವೆ. ಪ್ರಜಾಪ್ರಭುತ್ವ ಸಮಾಜವಾದ, ವ್ಯಕ್ತಿ ಸ್ವಾತಂತ್ರ್ಯ, ಕ್ರಾಂತಿಯ ಮನೋಭಾವ ಹಾಗೂ ರಾಷ್ಟ್ರೀಯತೆಯನ್ನು ಆಧರಿಸಿದ ರಾಷ್ಟ್ರಗಳು ಇಲ್ಲಿ ಜನ್ಮತಾಳಿವೆ.

ಯುರೋಪ್ ವೈವಿಧ್ಯಮಯವಾದ ಭೌಗೋಳಿಕ, ಆರ್ಥಿಕ, ಸಾಂಸ್ಕøತಿಕ ಹಾಗೂ ರಾಜಕೀಯ ಲಕ್ಷಣಗಳನ್ನೊಳಗೊಂಡಿದೆ. ಅದಕ್ಕನುಸಾರವಾಗಿ ಉತ್ತರ ಯುರೋಪ್, ಪಶ್ಚಿಮ ಯುರೋಪ್, ಪಶ್ಚಿಮದ ತೀರಪ್ರದೇಶಗಳು, ಮಧ್ಯ ಯುರೋಪ್, ದಕ್ಷಿಣ ಯುರೋಪಿನ ಮಧ್ಯ ಪ್ರದೇಶ, ಮೆಡಿಟೇರಿಯನ್ ಪ್ರದೇಶ ಮತ್ತು ಪೂರ್ವ ಯುರೋಪ್ ಎಂದು ಈ ಖಂಡವನ್ನು ವಿಭಾಗಿಸಬಹುದು. ಉತ್ತರ ಯುರೋಪ್ ನಾರ್ವೆ, ಸ್ವೀಡನ್, ಫಿನ್‍ಲೆಂಡ್, ಹಾಗೂ ಐಸ್‍ಲೆಂಡ್ ದೇಶಗಳನ್ನು ಪಶ್ಚಿಮ ತೀರಪ್ರದೇಶ, ಬ್ರಿಟಿಷ್ ದ್ವೀಪಗಳು, ನೆದರ್‍ಲೆಂಡ್, ಫ್ರಾನ್ಸ್, ಬೆಲ್ಜಿಯಮ್, ಲಕ್ಸೆಮ್‍ಬರ್ಗ್ ದೇಶಗಳನ್ನೂ ಮಧ್ಯ ಯುರೋಪ್ ಪ್ರದೇಶ, ಜರ್ಮನಿ, ಚೆಕೊಸ್ಲೊವಾಕಿಯ, ಪೋಲೆಂಡ್, ಸ್ವಿಟ್ಜ್‍ರ್ಲೆಂಡ್ ಮತ್ತು ಆಸ್ಟ್ರೀಯ ದೇಶಗಳನ್ನೂ ದಕ್ಷಿಣ ಯುರೋಪಿನ ಮಧ್ಯ ಪ್ರದೇಶ ಹಂಗೇರಿ, ಯುಗೋಸ್ಲಾವಿಯ, ರೊಮೇನಿಯ ಮತ್ತು ಬಲ್ಗೇರಿಯ ದೇಶಗಳನ್ನೂ ಮೆಡಿಟೇರಿಯನ್ ಪ್ರದೇಶ. ಗ್ರೀಸ್, ಮಾಲ್ಟಾ, ಇಟಲಿ, ದಕ್ಷಿಣ ಜರ್ಮನಿ, ದಕ್ಷಿಣ ಫ್ರಾನ್ಸ್, ಸ್ಪೇನ್ ಮತ್ತು ಪೋರ್ಚುಗಲ್ ದೇಶಗಳನ್ನೂ ಪೂರ್ವ ಯುರೋಪ್ ರಷ್ಯವನ್ನೂ ಒಳಗೊಂಡಿದೆ.

ಮೇಲ್ಮೈ ಲಕ್ಷಣಗಳು: ಯುರೋಪ್ ಮೇಲ್ಮೈಲಕ್ಷಣಗಳು ವೈವಿಧ್ಯಮಯ. ಇಲ್ಲಿ ಹಲವು ಭೂಸಾದೃಶ್ಯಗಳು ಕಂಡುಬಂದರೂ ಅವು ಒಂದಕ್ಕೊಂದು ತದ್ವಿರುದ್ಧವಾಗಿವೆ. ಮೈದಾನ, ಪರ್ವತ ಶ್ರೇಣಿಗಳು, ಪ್ರಸ್ಥಭೂಮಿಗಳು, ಕಣಿವೆಗಳು ಮುಂತಾದ ಸ್ವರೂಪಗಳನ್ನು ಹೊಂದಿದೆ. ಖಂಡದ ಎಲ್ಲ ಭೂಸ್ವರೂಪಗಳು ಉಗಮಿಸಿದ ಕಾಲ ಮತ್ತು ಅವುಗಳ ಲಕ್ಷಣಗಳು ಆಧಾರದ ಮೇಲೆ, ಖಂಡವನ್ನು ಮುಖ್ಯವಾಗಿ ಐದು ಭಾಗಗಳಾಗಿ ವಿಂಗಡಿಸಲಾಗಿದೆ: ವಾಯವ್ಯ ಪರ್ವತ ಭಾಗ, ಯುರೋಪಿನ ಮಹಾ ಮೈದಾನಗಳು, ಮಧ್ಯ ಯುರೋಪಿನ ಪರ್ವತ ಪಂಕ್ತಿಗಳು, ದಕ್ಷಿಣ ಯುರೋಪಿನ ಮಡಿಕೆ ಪರ್ವತಗಳು ಮತ್ತು ರಷ್ಯದ ಮೈದಾನ.

1. ವಾಯವ್ಯ ಪರ್ವತಗಳು ಬಹಳ ಪುರಾತನವಾದವೆಂದು ಭೂವಿe್ಞÁನಿಗಳ ಅಭಿಪ್ರಾಯ. ಈ ಪರ್ವತಗಳೂ ಭೂ ಇತಿಹಾಸದ ಸೈಲೂರಿಯನ್, ಕ್ಯಾಲಿಡೋನಿಯನ್ ಹಾಗೂ ಚಾರ್ನಿಯನ್ ಯುಗಗಳಲ್ಲಿ ಹುಟ್ಟಿದವೆಂದು ಹೇಳಲಾಗಿದೆ. ನಾರ್ವೆ, ಸ್ವೀಡನ್, ಫಿನ್ಲೆಂಡ್, ಉತ್ತರ ಸ್ಕಾಟ್‍ಲೆಂಡ್, ಪಶ್ಚಿಮ ಇಂಗ್ಲೆಂಡ್, ಉತ್ತರ ಐರ್ಲೆಂಡ್, ಮತ್ತು ಐಸ್‍ಲೆಂಡ್‍ಗಳಲ್ಲಿ ಈ ಪರ್ವತಗಳು ಹರಡಿವೆ. ಪ್ಲೀಸ್ಟೋಸಿನ್ ಹಿಮಯುಗದಲ್ಲಿ ಹಿಮನದಿಗಳಿಂದ ವೈವಿಧ್ಯಮಯ ಭೂಸಾದೃಶ್ಯಗಳು ನಿರ್ಮಾಣಗೊಂಡಿವೆ.

2. ಯುರೋಪ್‍ನ ಮಹಾ ಮೈದಾನಗಳು ಖಂಡದ ಎರಡನೆಯ ಭೌಗೋಳಿಕ ವಿಭಾಗ. ಇವು ಪಶ್ಚಿಮ ಫ್ರಾನ್ಸ್‍ನಿಂದ ಹಿಡಿದು ಪೂರ್ವ ರಷ್ಯದವರೆಗೂ ವಿಶಾಲವಾಗಿ ಹರಡಿದೆ.

3. ಮಧ್ಯ ಯುರೋಪಿನ ಅನೇಕ ಪರ್ವತಗಳು ಹರ್ಸೀನಿಯನ್ ಯುಗದವು. ಅಂದು ನಡೆದ ಭೂಕವಚದ ಚಲನೆಗಳಿಂದಾಗಿ ಈ ಪ್ರದೇಶದಲ್ಲಿ ಕೆಲವು ಭಾಗಗಳು ಮೇಲಕ್ಕೆದ್ದು ಏರುಪೇರುಗಳುಂಟಾದವೆಂದು ಅವುಗಳ ಅಧ್ಯಯನದಿಂದ ತಿಳಿಯುತ್ತವೆ. 

4. ದಕ್ಷಿಣ ಯುರೋಪಿನ ಹೆಚ್ಚಿನ ಭಾಗಗಳಲ್ಲಿರುವ ಅಲ್ವೈನ್ ಮಡಿಕೆ ಪರ್ವತಗಳು ಟರ್ಷಿಯರಿ ಯುಗದಲ್ಲಿ ನಿರ್ಮಾಣಗೊಂಡವು. ಇವು ಪಶ್ಚಿಮದ ಸ್ಪೇನ್‍ನಿಂದ ಪೂರ್ವದ ಆರ್ಮೇನಿಯಮ್‍ವರೆಗೂ ಹರಡಿವೆ. ಉತ್ತರ ಆಫ್ರಿಕದ ಅಂಚಿನಲ್ಲಿ ಹರಡಿರುವ ಅಟ್ಲಾಸ ಪರ್ವತಗಳು ಈ ಗುಂಪಿಗೆ ಸೇರುತ್ತವೆ. ಇವಲ್ಲದೆ ಪೂರ್ವಕ್ಕೆ ಸಿಯೆರಾನೇವಾದ, ಕ್ಯಾಂಟ್ಯಾಬ್ರಿಯನ್, ಪಿರನೀಸ್, ಆಲ್ಫ್ಸ್, ಬಾಲ್ಕನ್ ಪರ್ವತಗಳು ಕಾಕಸಸ್ ಪರ್ವತಗಳಾಗಿವೆ. ಇವುಗಳು ಮುಂದೆ ಆರ್ಮೇನಿಯಮ್ ಶ್ರೇಣಿಯಲ್ಲಿ ಸೇರಿ ಪೂರ್ವಕ್ಕೆ ಚೀನದ ಕಡೆಗೆ ಟಯನ್‍ಷಾನ್ ಪರ್ವತಗಳಾಗಿವೆ.

5. ಯುರೋಪಿನ ಪೂರ್ವಕ್ಕೆ ಯುರೇಷಿಯ ಪ್ರದೇಶದ ಮೈದಾನ ವಿಶಾಲವಾದದು. ಇದು ಕ್ಯಾಲಿಡೋನಿಯ ಹಾಗೂ ಕಾಕಸಸ್ ಪರ್ವತಗಳ ನಡುವೆ ಹರಡಿದೆ. ಈ ಪ್ರದೇಶ ಮರಳು ಮಿಶ್ರಿತ ನೊರಜು ಮಣ್ಣು ಮತ್ತು ಹಳದಿ ಬಣ್ಣದ ಲೋಯೆಸ್ ಪುಡಿಮಣ್ಣಿನಿಂದ ಹಾಗೂ ಭಾರಿಪ್ರಮಾಣದ ಖನಿಜ ಪದಾರ್ಥಗಳಿಂದ ಕೂಡಿದೆ.

ನದಿ ಮತ್ತು ಸರೋವರಗಳು: ಯುರೋಪಿನ ನದಿಗಳು ಹೆಚ್ಚಾಗಿ ಸಮತಟ್ಟಾದ ಪ್ರದೇಶಗಳಲ್ಲಿ ನಿಧಾನವಾಗಿ ಹರಿಯುವುದರಿಂದ ಜನರ ಆರ್ಥಿಕ ಚಟುವಟಿಕೆಗಳಿಗೆ ಪೂರಕವಾಗಿ ಜಲಯಾನಕ್ಕೆ ಉಪಯುಕ್ತವಾಗಿವೆ. ಮುಖ್ಯವಾಗಿ ಯುರೋಪಿನ ನದಿಗಳಲ್ಲಿ ಹೆಚ್ಚು ದೂರ ಹರಿವ ಓಲ್ಗಾನದಿ ರಷ್ಯದಲ್ಲಿ ಸುಮಾರು 3690 ಕಿಮೀ. ಹರಿದು ಕ್ಯಾಸ್ಪಿಯನ್ ಸಮುದ್ರ ಸೇರುವುದು. ಹಾಗೆಯೇ ರೈನ್ ನದಿ 1,100ಕಿಮೀ. ಡಾನ್ಯೂಬ್ 2858 ಕಿಮೀ ಹರಿಯುವುವು. ನದಿಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಬಹುದು.

1. ಪಶ್ಚಿಮಕ್ಕೆ ಹರಿಯುವ ಮತ್ತು ಒಳನಾಡಿನ ನದಿಗಳು : ಗ್ವಾಡಲ್ ಕ್ವೆವರ್, ಸೇನ್, ರೈನ್ ಇವು ನೀರಾವರಿ, ಜಲಯಾನ, ವಿದ್ಯುಚ್ಚಕ್ತಿಗೂ. ಎಲ್ಬ, ಓಡರ್, ವಿಸ್ತುಲಾ ಟೆಗಸ್ ನದಿಗಳು ಕೈಗಾರಿಕೆಗಳಿಗೂ ನೀರೊದಗಿಸುತ್ತವೆ.
2. ಮೆಡಿಟೇರಿಯನ್ ಸಮುದ್ರವನ್ನು ಸೇರುವ ನದಿಗಳೂ: ಎಬ್ರೋ, ರಾನ್, ಮತ್ತು ಪೋ. ಇವು ನೀರಾವರಿ, ಜಲಯಾನ ಮತ್ತು ವಿದ್ಯುಚ್ಚಕ್ತಿ ಉತ್ಪಾದನೆಗೆ ಉಪಯುಕ್ತವಾಗಿವೆ.
3. ಪೂರ್ವಕ್ಕೆ ಹರಿಯುವ ನದಿಗಳೂ: ಕಪ್ಪು ಸಮುದ್ರವನ್ನು ಸೇರುವ ಡಾನ್ಯೂಬ್ ಜಲಸಾರಿಗೆಗೆ ಉಪಯುಕ್ತವಾಗಿದೆ. ರಷ್ಯದ ಓಲ್ಗಾ ಮತ್ತು ಯೂರಲ್ ನದಿಗಳು ಕ್ಯಾಸ್ಪಿಯನ್ ಸಮುದ್ರವನ್ನು ಸೇರುವ ಮುನ್ನ ವ್ಯಾಪಾರ ವಾಣಿಜ್ಯಗಳಿಗೆ ನೌಕಾಯಾನಕ್ಕೆ ಸಹಾಯಕವಾಗಿವೆ. ನೀಪರ್ 2272 ಕಿಮೀ. ಉದ್ದ ಹರಿದು ಕಪ್ಪು ಸಮುದ್ರವನ್ನು ಸೇರುತ್ತದೆ. ನೀರಾವರಿ ನೌಕಾಯಾನ ಮತ್ತು ವಿದ್ಯುಚ್ಚಕ್ತಿ ಉತ್ಪಾದನೆಗೆ ಸಹಾಯಕವಾಗಿವೆ. ಯುರೋಪ್ ಖಂಡದಲ್ಲಿ ಈ ಮೇಲಿನ ನದಿಗಳಲ್ಲದೆ ಸಾವಿರಾರು ಸರೋವರಗಳೂ ಇವೆ. ಫಿನ್ಲೆಂಡ್ ಒಂದರಲ್ಲೇ ಹಿಮಯುಗದಲ್ಲಿ ನಿರ್ಮಾಣಗೊಂಡ ಸಾವಿರಕ್ಕೂ ಹೆಚ್ಚು ಸರೋವರಗಳಿವೆ. ನಾರ್ವೆ, ಸ್ವೀಡನ್, ಸ್ಕಾಟ್‍ಲೆಂಡ್ ಹಂಗೇರಿ ಮೊದಲಾದ ಕಡೆಗಳಲ್ಲಿ ಸರೋವರಗಳಿವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ - ಕಾನ್ಸ್‍ಸ್ಟಾನ್, ಬಲಾಟೌನ್, ಕೊವೊಗಾರ್ಡ್, ಮೈಜೋರಿ, ಸ್ಕೂಟ್‍ರೀ, ವೇರ್ನ್‍ವೆಟರ್ನ್, ಮೆಜಾರನ್, ಲಾಡಗ, ಒನೆಗ, ಪೈಪಾಸ್ ಮುಂತಾದವು. 

ವಾಯುಗುಣ : ಯುರೋಪ್ ಖಂಡ ಸಮಶೀತೋಷ್ಣ ಮತ್ತು ಶೀತವಲಯಗಳೆರಡರಲ್ಲೂ ಹರಡಿದೆ. ಖಂಡದ ಸನ್ನಿವೇಶ, ವಿಸ್ತಾರ, ಇಲ್ಲಿನ ಪರ್ವತಗಳು ಬೆಟ್ಟಗುಡ್ಡಗಳು, ಅರಣ್ಯ ಪ್ರದೇಶ, ಸರೋವರಗಳು, ಖಂಡವನ್ನು ಸುತ್ತುವರಿದ ಸಮುದ್ರ ಇವೆಲ್ಲ ಇಲ್ಲಿನ ವಾಯುಗುಣದ ಮೇಲೆ ಪ್ರಭಾವ ಬೀರುತ್ತವೆ. ಒಟ್ಟಾರೆ ಖಂಡದ ವಾಯುಗುಣ ಆರೋಗ್ಯಕರವಾಗಿದ್ದು ಸರ್ವತೋಮುಖ ಏಳಿಗೆಗೆ ಸಹಾಯಕವಾಗಿದೆ.

ಈ ಖಂಡದಲ್ಲಿ ಆರು ವಾಯುಗುಣ ವಲಯಗಳನ್ನು ಗುರುತಿಸಬಹುದು. ಮೆಡಿಟೇರಿಯನ್, ಆರ್ಕ್‍ಟಿಕ್, ಶೀತವಾಯುಗುಣ, ಸಾಗರಿಕ, ಸಮಶೀತೋಷ್ಣ ಮತ್ತು ಖಂಡಾಂತರ ವಾಯುಗುಣ ಪ್ರದೇಶ. ಆಗ್ನೇಯದಲ್ಲಿರುವ ಕ್ಯಾಸ್ಪಿಯನ್ ಸಮುದ್ರವೂ ಸುತ್ತಲೂ ಭೂಮಿಯಿಂದ ಆವರಿಸಿದ್ದು ಒಂದು ಸರೋವರದಂತೆಯೇ ಇದ್ದು 372000 ಚ.ಕಿ.ಮೀ. ವ್ಯಾಪಿಸಿದೆ. ಸರೋವರಗಳಲ್ಲಿ ದೊಡ್ಡದಾದುದೆಂದರೆ ಲಾಡಗ ಸರೋವರ ರಷ್ಯದ ವಾಯವ್ಯದಲ್ಲಿ 17.703 ಚ.ಕಿ.ಮೀ. ವ್ಯಾಪಿಸಿದೆ. ಫಿನ್ಲೆಂಡ್ ಸುಮಾರು 60,000 ಸರೋವರಗಳಿವೆ. ಸ್ಪೇನ್ ಗ್ರೀಸ್, ಸೈಪ್ರಸ್, ಮಾಲ್ಟಾ, ಪೋರ್ಚುಗಲ್ ಮುಂತಾದವುಗಳಲ್ಲಿ ಮೆಡಿಟೇರಿಯನ್ ವಾಯುಗುಣ ಕಂಡುಬರುತ್ತದೆ. ಇದನ್ನು ಬೆಚ್ಚನೆಯ ಸಮಶೀತೋಷ್ಣ ಪಶ್ಚಿಮ ಅಂಚಿನ ವಾಯುಗುಣವೆಂತಲೂ ಕರೆಯುತ್ತಾರೆ. ಸೆಕೆಯಿಂದ ಕೂಡಿದ ಬೇಸಗೆ. ತಂಪಾದ ಮಳೆಯಿಂದ ಕೂಡಿದ ಚಳಿಗಾಲ ಮತ್ತು ಬೆಚ್ಚನೆಯ ಸೂರ್ಯರಶ್ಮಿ ಆಹ್ಲಾದಕರವಾದ ವಾಯುಗುಣ ಇದ್ದು ಜನವಾಸಕ್ಕೆ ಮತ್ತು ಹಣ್ಣಿನ ಬೇಸಾಯಕ್ಕೆ ಅನುಕೂಲಕರವಾಗಿದೆ. ಈ ದೇಶಗಳು ಹಣ್ಣುಗಳನ್ನು ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸಿ ರಫ್ತು ಮಾಡುತ್ತವೆ. ಜರ್ಮನಿ ಮತ್ತು ಫ್ರಾನ್ಸ್ ದೇಶಗಳು ದ್ರಾಕ್ಷಾರಸದ ಕೈಗಾರಿಕೆಯಲ್ಲಿ ಜಗತ್ಪ್ರಸಿದ್ಧವಾಗಿವೆ. ಮೆಡಿಟೇರಿಯನ್ ದೇಶಗಳನ್ನು ದ್ರಾಕ್ಷಾರಸದ ನಾಡೆಂದು ಕರೆಯಲಾಗಿದೆ.

ಆರ್ಕ್‍ಟಿಕ್ ಸಾಗರದ ಅಂಚಿನ ಪ್ರದೇಶಗಳಲ್ಲಿ ಶೀತ ವಾಯುಗುಣವಿದ್ದು ವರ್ಷದ ಹೆಚ್ಚಿನ ದಿನಗಳಲ್ಲಿ ಉಷ್ಣಾಂಶ ಕಡಿಮೆ ಇರುತ್ತದೆ. ಚಳಗಾಲದ ಉಷ್ಣಾಂಶ ಹೆಪ್ಪುಗಟ್ಟುವ ಬಿಂದುವಿಗಿಂತಲೂ ಕಡಿಮೆ ಇಳಿಯುತ್ತದೆ. ಬೇಸಗೆ ಉಷ್ಣಾಂಶ 100 ಅಗಿಂತ ಮೇಲೇರುವುದಿಲ್ಲ. ಬಹುಭಾಗ ಹಿಮಾಚ್ಚಾದಿತವಾಗಿರುತ್ತದೆ.  

ಶೀತವಾಯಗುಣ ನಾರ್ವೆ, ಸ್ವೀಡನ್, ಫಿನ್ಲೆಂಡ್ ಮತ್ತು ರಷ್ಯದ ಬಹುಭಾಗಗಳಲ್ಲಿ ಇರುತ್ತದೆ. ಬೇಸಗೆ ಉಷ್ಣಾಂಶ 15.50ಅ ಇರುತ್ತದೆ. ಬೇಸಗೆ ಮಳೆ ಸಾಮಾನ್ಯವಾಗಿರುತ್ತದೆ. ಚಳಿಗಾಲದ ಉಷ್ಣಾಂಶ -6.6 ಅಗಿಂತಲೂ ಕಡಿಮೆ ಇರುವುದುಂಟು. ಓಸ್ಲೋದಲ್ಲಿ _4.40, ಅ ಹೆಲ್ಸೆಂಕಿಯಲ್ಲಿ_6.60ಅ ಹಾಗೂ ಲೆನಿನ್‍ಗ್ರಾಡ್‍ನಲ್ಲಿ _9.40 ಅ ಇರುತ್ತದೆ.
ತಂಪು ವಾಯುಗುಣ ಸಮಶೀತೋಷ್ಣವಲಯದ ಬ್ರಿಟಿಷ್ ದ್ವೀಪಗಳು ಡೆನ್ಮಾರ್ಕ್, ಬೆಲ್ಜಿಯಮ್, ಪಶ್ಚಿಮ ಫ್ರಾನ್ಸ್, ಪಶ್ಚಿಮ ನಾರ್ವೆ ಸ್ಪೇನ್‍ಗಳಲ್ಲಿ ಕಂಡುಬರುತ್ತವೆ. ಚಳಿಗಾಲದ ಮಳೆ ಸಾಮಾನ್ಯ. ಸಾಗರ ಪ್ರವಾಹಗಳು ಈ ದೇಶಗಳ ವಾಯುಗುಣದ ಮೇಲೆ ಪ್ರಭಾವ ಬೀರುತ್ತವೆ. ಈ ಪ್ರದೇಶಗಳು ಸಾಗರ ಸಮುದ್ರಗಳಿಂದ ಸುತ್ತುವರಿದು ಹತ್ತಿರುದಲ್ಲಿರುವುದರಿಂದ ಇಲ್ಲಿ ಸಾಗರಿಕ ವಾಯುಗುಣವಿರುತ್ತದೆ. ಇದು ಇಲ್ಲಿನ ಜನಜೀವನ ಹಾಗೂ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ.

ಸಮಶೀತೋಷ್ಣ ಸ್ಥಿತ್ಯಂತರ ವಾಯುಗುಣ ದಕ್ಷಿಣ ಸ್ವೀಡನ್, ಮಧ್ಯ ಪೂರ್ವ ಫ್ರಾನ್ಸ್, ಜರ್ಮನಿ, ಸ್ವಿಟ್‍ಜರ್‍ಲೆಂಡ್, ಪಶ್ಚಿಮ ಪೋಲೆಂಡ್ ಮತ್ತು ಡಾನ್ಯೂಬ್ ಕಣಿವೆ ಭಾಗಗಳಲ್ಲಿ ಕಂಡು ಬರುತ್ತದೆ. ಅತಿ ಬೇಸಗೆ, ಅತಿ ಚಳಿ ಹಾಗೂ ವರ್ಷದ ಬಹುದಿನಗಳಲ್ಲಿ ಬೀಳುವ ಮಳೆ ಇದರ ಲಕ್ಷಣಗಳಾಗಿವೆ. ಖಂಡಾಂತರ ವಾಯುಗುಣ ರೊಮೇನಿಯ, ಬಲ್ಗೇರಿಯ, ಪೂರ್ವ ಪೋಲೆಂಡ್ ಮತ್ತು ರಷ್ಯಗಳಲ್ಲಿ ಕಂಡುಬರುತ್ತದೆ. ಇಲ್ಲಿ ಅತಿ ಬೇಸಗೆ ಹಾಗೂ ಅತಿ ಚಳಿಯಿಂದ ಕೂಡಿದ ಚಳಿಗಾಲ ಇರುತ್ತದೆ. ಚಳಿಗಾಲದಲ್ಲಿ_ 150ಅ ಇದ್ದರೆ ಬೇಸಗೆಯಲ್ಲಿ 210ಅ ಇರುತ್ತದೆ. ಬೇಸಗೆಯಲ್ಲಿ ಮಳೆ ಬೀಳುತ್ತದೆ; ಅರೆ ಮರುಭೂಮಿ ಲಕ್ಷಣಗಳನ್ನು ಹೊಂದಿವೆ.

ಸಸ್ಯವರ್ಗ: ಯುರೋಪಿನ ಎಲ್ಲೆಡೆ ಸರಾಸರಿ ವಾರ್ಷಿಕ 50ರಿಂದ 150 ಸೆಂಮೀ. ಮಳೆ ಬೀಳುತ್ತದೆ. ಇಲ್ಲಿನ ಸಸ್ಯವರ್ಗ ಪ್ರಾದೇಶಿಕ ವಾಯುಗುಣ, ಮೇಲ್ಮೈಲಕ್ಷಣ ಹಾಗೂ ಭೂ ಫಲವತ್ತತೆಯನ್ನು ಅವಲಂಬಿಸಿವೆ. ಇಲ್ಲಿನ ಸಸ್ಯವರ್ಗವನ್ನು ಈ ಕೆಳಕಂಡಂತೆ ವಿಂಗಡಿಸಬಹುದಾಗಿದೆ; ಮೆಡಿಟೇರಿಯನ್ ಮತ್ತು ಎಲೆಗಳುದುರುವ ಸಸ್ಯವರ್ಗ, ಕೋನಿಫರಸ್, ತಂಡ್ರಾ ಮತ್ತು ಜವುಗು ಸಸ್ಯವರ್ಗ ಹಾಗೂ ಹುಲ್ಲುಗಾವಲುಗಳು.

ಮೆಡಿಟೇರಿಯನ್ ಸಸ್ಯವರ್ಗ ಗ್ರೀಸ್, ಮಾಲ್ಟಾ, ಸೈಪ್ರಸ್, ಇಟಲಿ, ದಕ್ಷಿಣ ಜರ್ಮನಿ, ದಕ್ಷಿಣ ಫ್ರಾನ್ಸ್, ಸ್ಪೇನ್, ಪೋರ್ಚುಗಲ್ ದೇಶಗಳಲ್ಲಿ ಕಂಡುಬರುತ್ತವೆ. ಇಲ್ಲಿನ ಸಸ್ಯವರ್ಗ ವೈವಿಧ್ಯಮಯವಾಗಿದ್ದು ಈ ಕಾಡುಗಳಲ್ಲಿ ಬೆಳೆಯುವ ಮರಗಳ ಬೇರು ಬಹಳ ಆಳದವರೆಗೂ ಭೂಮಿಯಲ್ಲಿ ಬೇರುಬಿಟ್ಟು ಬೇಸಗೆಯಲ್ಲಿ ನೀರಿನ ಕೊರತೆ ಆದಾಗ ಅಂತರ್ಜಲವನ್ನು ಉಪಯೋಗಿಸಿಕೊಂಡು ಬದುಕುತ್ತವೆ. ಮರಗಳಿಂದ ನೀರು ಹೊರಕ್ಕೆ ಹೆಚ್ಚಾಗಿ ಭಾಷ್ಪವಿಸರ್ಜನೆಯ ಆಗದಂತೆ ಮಂದವಾದ ತೊಗಟೆ ಹೊಂದಿದೆ. ಜೊತೆಗೆ ಮರಗಳ ಹಾಗೂ ಗಿಡಗಳ ಎಲೆಗಳ ಹೊರಭಾಗದ ಮೇಲೆ ಅಂಟು ದ್ರವದ ಜಿನುಗು ಇರುತ್ತದೆ. ಈ ಭಾಗಗಳಲ್ಲಿ ಹಣ್ಣಿನ ಹಲವಿಧದ ಮರಗಿಡಗಳು ಬೆಳೆಯುತ್ತವೆ. ಓಕ್, ಕಾರ್ಕ್, ಆಲಿವ್, ಹೋಲಿ, ಲಾರೆಲ್ ಹಾಗೂ ಹಿಪ್ಪನೇರಳೆ ಇವು ಹೆಚ್ಚಾಗಿ ಕಂಡುಬರುತ್ತವೆ.

ಎಲೆಗಳುದುರುವ ಕಾಡುಗಳು ಫ್ರಾನ್ಸ್‍ನಿಂದ ರಷ್ಯದವರೆಗೂ ಕಂಡುಬರುತ್ತವೆ. ಇವುಗಳನ್ನು ಮಿಶ್ರ ಕಾಡುಗಳೆಂದೂ ಕರೆಯುತ್ತಾರೆ. ಇಲ್ಲಿ ಆಷ್, ಓಕ್, ಬೀಚ್, ಪಾಪ್ಲರ್, ವಿಲ್ಲೋ ಮತ್ತು ಓಸಿಮರ್ ಮರಗಳು ಬೆಳೆಯುತ್ತವೆ. ಚಳಿಗಾಲದಲ್ಲಿ ನೀರಿನ ಕೊರತೆ ಉಂಟಾದಾಗ ಈ ಮರಗಳ ಎಲೆಗಳು ಉದುರಿ ಬೇಸಗೆಯಲ್ಲಿ ಚಿಗುರುತ್ತವೆ. ಈ ಭಾಗಗಳಲ್ಲಿ ಕೈಗಾರೀಕರಣದಿಂದಾಗಿ ಇವುಗಳ ಪ್ರದೇಶ ಕ್ರಮೇಣವಾಗಿ ಕಡಿಮೆಯಾಗುತ್ತಿದೆ. ಆರ್ಥಿಕವಾಗಿ ಮಹತ್ತ್ವಹೊಂದಿರುವ ಕೋನಿಫರಸ್ ಕಾಡುಗಳು ಯುರೋಪಿನ ಬಹುಪಾಲು ಪ್ರದೇಶವನ್ನು ಆವರಿಸಿಕೊಂಡಿವೆ. ಈ ಕಾಡುಗಳಲ್ಲಿ ಪೈನ್, ಸ್ಟ್ರೂಸ್, ಫರ್, ಬರ್ಚ್, ಆಲ್ಡರ್, ಪಾಪ್ಲರ್, ವಿಲ್ಲೋ, ಮುಂತಾದ ಮರಗಳಿವೆ. ನಾರ್ವೆ, ಸ್ವೀಡನ್, ಮತ್ತು ಪೈಗಾ ಕಾಡುಗಳೆಂದೂ ಕರೆಯುವರು. ಮಳೆ ಕಡಿಮೆ ಬೀಳುವ ಪೂರ್ವ ಹಾಗೂ ಆಗ್ನೇಯ ಭಾಗಗಳಲ್ಲಿ ಸ್ಟೆಪಿ ಹುಲ್ಲುಗಾವಲುಗಳಿವೆ. ಇವು ಪಶುಪಾಲನೆಗೆ ಪೂರಕವಾದವು. ಇತ್ತೀಚಿಗೆ ಈ ಭಾಗಗಳ ಚರ್ನೋ ಜೆಮ್ ಮಣ್ಣಿನಲ್ಲಿ ಗೋಧಿ ಕೃಷಿ ಅಭಿವೃದ್ಧಿಗೊಂಡು ರಷ್ಯ ಗೋಧಿಕಣಜವೆಂದು ಕರೆಸಿಕೊಂಡಿದೆ. ತಂಡ್ರಾ ಸಸ್ಯವರ್ಗ ಉತ್ತರದ ಆರ್ಕ್‍ಟಿಕ್ ಸಾಗರ ಕರಾವಳಿ ಪ್ರದೇಶಗಳಲ್ಲಿ ಕಂಡುಬರುತ್ತವೆ. ವರ್ಷದ ಬಹುಪಾಲು ದಿನಗಳಲ್ಲಿ ಈ ಪ್ರದೇಶಗಳು ಹಿಮದಿಂದ ಮುಚ್ಚಿರುತ್ತವೆ. ಈ ಪ್ರದೇಶದ ಬೇಸಗೆಯಲ್ಲಿ ಸುಮಾರು ಮೂರು ತಿಂಗಳ ಕಾಲಾವಧಿಯಲ್ಲಿ ಸಣ್ಣಸಣ್ಣ ಸಸ್ಯಗಳು ಹುಟ್ಟಿ ಬೆಳೆದು ಹೂ ಬಿಟ್ಟು ಅನಂತರ ಹಿಮದಿಂದ ಮುಚ್ಚಿಹೋಗುತ್ತವೆ. ಲಿಲಿಪುಟ್, ಬಟರ್‍ಕಪ್, ಫರ್‍ಗೆಟ್ ಮಿ ನಾಟ್ ಮುಂತಾದ ಹೂ ಗಿಡಗಳು ಮಾತ್ರ ಇಲ್ಲಿ ಬೆಳೆಯುತ್ತವೆ.

ಜವುಗು ಸಸ್ಯವರ್ಗ ಫ್ರಾನ್ಸ್‍ನ ಬಿಸ್ಕೆ ಅಖಾತದ ತೀರಪ್ರದೇಶ, ಡೆನ್ಮಾರ್ಕಿನ ಜೆಟ್‍ಲೆಂಡ್ ಪಶ್ಚಿಮ ಭಾಗ, ಪಶ್ಚಿಮ ಐರ್ಲೆಂಡ್ ಹಾಗೂ ಸ್ಕಾಟ್ಲೆಂಡ್‍ಗಳಲ್ಲಿ ಕಂಡುಬರುತ್ತವೆ. ಗಿಡ್ಡನೆಯ ಮುಳ್ಳಿನ ಹಾಗೂ ಹೂ ಗಿಡಗಳ ಪೊದೆಗಳು ಜೊಂಡುಹುಲ್ಲು ಮುಂತಾದವು ಇಲ್ಲಿಯ ಸಸ್ಯವರ್ಗ. ಯುರೋಪಿನ ಅರಣ್ಯ ಪ್ರದೇಶ, ಹುಲ್ಲುಗಾವಲು ಮತ್ತು ಎತ್ತರದ ಪರ್ವತ ಪ್ರದೇಶ ಹಾಗೂ ತಂಡ್ರಾ ಇವುಗಳಲ್ಲಿ ಬೆಳೆಯುವ ಸಸ್ಯವರ್ಗ ವೈವಿಧ್ಯತೆಯಿಂದ ಕೂಡಿದ್ದು ಆ ವೈವಿಧ್ಯತೆಗೆ ಅನುಗುಣವಾಗಿ ಅಲ್ಲಿಯ ಸಸ್ಯವರ್ಗವನ್ನು ಅವಲಂಬಿಸಿ ಯುರೋಪಿನ ಪ್ರಾಣಿ ಪಕ್ಷಿವರ್ಗಗಳಿವೆ. ಪ್ರಾಣಿ ಪಕ್ಷಿಗಳ ಸಂರಕ್ಷಣೆಗೆ ರಕ್ಷಿತ ಅರಣ್ಯ ಪ್ರದೇಶಗಳೂ ರಾಷ್ಟ್ರೀಯ ಉದ್ಯಾನವನಗಳೂ ಪ್ರಾಣಿ ಸಂಗ್ರಹಾಲಯಗಳೂ ಯುರೋಪಿನಲ್ಲಿವೆ. ರಷ್ಯ ಮತ್ತು ಸ್ಕಾಂಡಿನೇವಿಯಯಗಳಲ್ಲಿ ಕಂದು ಬಣ್ಣದ ಕರಡಿ ಯುರೋಪಿನ ವಿಶೇಷ ಪ್ರಾಣಿ ವರ್ಗ. ನರಿ, ತೋಳ, ವಿವಿಧ ಬಗೆಯ ಜಿಂಕೆಗಳಲ್ಲಿ ಎತ್ತರದ ಬೆಟ್ಟ ಪ್ರದೇಶಗಳಲ್ಲಿ ಇರುವ ಷ್ಯಾಮಾಯ್ ಮತ್ತು ಐಬೆಕ್ಸ್ ಎಂಬ ಮೇಕೆಯಂತಿರುವ ಕಾಡು ಜಿಂಕೆಗಳು ಎಲ್ಕ್ ಎನ್ನುವ ಸಾರಂಗ, ಹಿಮಸಾರಂಗ, ಆರ್ಕ್‍ಟಿಕ್ ಅಟ್ಲಾಂಟಿಕ್ ಮತ್ತು ಮೆಡಿಟೇರಿಯನ್ ಸಮದ್ರ ತೀರಗಳಲ್ಲಿ ಸಿಗುವ ಸೀಲ್ ಪ್ರಾಣಿಗಳೂ ಮತ್ತು ಯುರೋಪಿನ ಎಲ್ಲೆಡೆ ಕಾಣಸಿಗುವ ಬ್ಯಾಡ್ಜರ್ ಕರಡಿ ಜಾತಿಯ ಒಂದು ಚತುಷ್ಪಾದಿ, ಮೊಲ, ಮುಳ್ಳುಹಂದಿ, ಮಖಮಲ್ ಹೆಗ್ಗಣ. ಅಟರ್ ಜಲಚರ ಸಸ್ತನಿ. ನೀರುನಾಯಿ. ಕುಂದಿಲಿ, ಅಳಿಲು, ಕಾಡು ಹಂದಿ, ಮತ್ತು ಹದ್ದು. ಗೂಬೆ, ರಾಬಿನ್, ಕೊಕ್ಕರೆ, ಪಾರಿವಾಳ, ಗುಬ್ಬಚ್ಚಿ, ನೈಟಿಂಗೇಲ್, ರಾವೆವ್ ಪಿಂಚ್, ಮೊದಲಾದ ಪಕ್ಷಿಗಳಿವೆ. ಯುರೋಪಿನ ಸಮುದ್ರ ಸರೋವರ ಮತ್ತು ನದಿಗಳಲ್ಲಿ ಹೇರಳವಾದ ಮತ್ಸ್ಯ ಸಂಪತ್ತಿದೆ. ಮೀನುಗಾರಿಕೆಯಲ್ಲಿ ಪ್ರಸಿದ್ಧವಾದ 10 ರಾಷ್ಟ್ರಗಳಲ್ಲಿ ನಾರ್ವೆ, ರಷ್ಯ, ಮತ್ತು ಸ್ಪೇನ್, ದೇಶಗಳು ಸೇರಿವೆ. ಪಶುಪಾಲನೆ ಹಾಗೂ ಕ್ಷೀರೋತ್ಪಾದನೆಗೂ ಯುರೋಪ್ ಪ್ರಸಿದ್ಧ ಕುರಿ ಕೋಳಿ ಸಾಕಣೆ ಹಾಗೂ ಅವುಗಳ ಸಂಬಂಧಿತ ಉದ್ಯಮಗಳೂ ಇಲ್ಲಿ ಹೆಚ್ಚು.

ಮಣ್ಣುಗಳು: ಯುರೋಪಿನ ಮೇಲ್ಮೈ ಲಕ್ಷಣ, ವಾಯುಗುಣ, ಶಿಲೆಗಳು ಇಲ್ಲಿನ ಮಣ್ಣಿನ ಮಾದರಿಗಳನ್ನು ನಿರ್ಧರಿಸಿವೆ. ಮೆಡಿಟೇರಿಯನ್ ಮಣ್ಣು ಪ್ರದೇಶ. ಪರ್ವತ ಮಣ್ಣು ಪ್ರದೇಶ. ಅರಣ್ಯಗಳ ಕಂದುಮಣ್ಣಿನ ಪ್ರದೇಶ. ಮರುಭೂಮಿ ಮಣ್ಣಿನ ಪ್ರದೇಶ. ಚೆಸ್ಟ್‍ನೆಟ್ ಮಣ್ಣಿನ ಪ್ರದೇಶ, ಕಪ್ಪು ಮಣ್ಣಿನ ಪ್ರದೇಶ, ಪಡ್‍ಜೋಲ್ ಮಣ್ಣಿನ ಪ್ರದೇಶ ಮತ್ತು ತಂಡ್ರಾ ಮಣ್ಣಿನ ಪ್ರದೇಶ.
ಇಟಲಿ, ದಕ್ಷಿಣ ಜರ್ಮನಿ, ದಕ್ಷಿಣ ಫ್ರಾನ್ಸ್, ಯೂಗೋಸ್ಲಾವಿಯ, ಮಾಲ್ಟಾ ಮುಂತಾದ ದೇಶಗಳಲ್ಲಿನ ಕಂದು ಬಣ್ಣದ ಮಣ್ಣಿನಲ್ಲಿ ಬಹಳವಾದ ಟೆರ್ರಾರೋಸಾ ಮಣ್ಣು ಹೆಚ್ಚಿನ ಭಾಗಗಳಲ್ಲಿ ಕಂಡುಬರುತ್ತವೆ. ಜ್ವಾಲಾಮುಖಿ ಪ್ರದೇಶಗಳಲ್ಲಿ ಜ್ವಾಲಾಮುಖಿ ಮಣ್ಣು ಪ್ರಧಾನವಾಗಿದೆ. ಇದು ಹಣ್ಣಿನ ಬೇಸಾಯಕ್ಕೆ ತುಂಬಾ ಯೋಗ್ಯ. ಪರ್ವತ ಪ್ರದೇಶಗಳಲ್ಲಿ ತಂಡ್ರಾ ಮಣ್ಣು. ಸ್ಕ್ರೀಮಣ್ಣು, ನುಗ್ಗಲು ಮಣ್ಣು ಕಂಡುಬರುತ್ತವೆ. ಇವುಗಳಲ್ಲಿ ನುಗ್ಗಲು ಮಣ್ಣು ಹೆಚ್ಚು ಫಲವತ್ತಾಗಿರುತ್ತದೆ. ಖಂಡದ ಕೆಲವು ಭಾಗಗಳಲ್ಲಿ ಪಡ್‍ಜೋಲ್, ಚೆರ್ನೋಜೆಮ್ ಹಾಗೂ ಮರುಭೂಮಿಯ ಮಣ್ಣುಗಳಿದ್ದು ಇವು ಬಾದಾಮಿ ಬಣ್ಣಕ್ಕೆ ಇರುತ್ತವೆ. ಇವುಗಳಲ್ಲದೆ ಕಾಡಿನ ಈ ಭಾಗಗಳಲ್ಲಿ ಪ್ರತಿವರ್ಷ ಎಲೆಗಳು ಉದುರಿ ಕೊಳೆತು ಫಲವತ್ತಾದ ಜೈವಿಕಾಂಶವಾಗಿ ಪರಿವರ್ತನೆಯಾಗಿ ಭೂಫಲವತ್ತತೆ ಹೆಚ್ಚುತ್ತ ಹೋಗುತ್ತದೆ.

ಆಗ್ನೇಯ ಯುರೋಪಿನ ಕ್ಯಾಸ್ಪಿಯನ್ ಸಮುದ್ರ ಸುತ್ತಲೂ ಫಲವತ್ತಲ್ಲದ ಮಣ್ಣು ಕಂಡುಬರುತ್ತದೆ. ನಿಸ್ಸಾರವಾದ ಚೆಸ್ಟ್‍ನೆಟ್ ಮಣ್ಣು ಪ್ರಧಾನವಾಗಿ ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರಗಳ ಉತ್ತರ ಭಾಗಗಳಲ್ಲಿ ಕಂಡುಬರುತ್ತವೆ. ಈ ಭಾಗಗಳಲ್ಲಿ ಹುಲ್ಲು ಬೆಳೆಯುವುದರಿಂದ ಪ್ರಾಣಿಗಳ ಸಾಕಾಣಿಕೆಯಿದೆ. ಕಪ್ಪು ಮಣ್ಣಿನ ಪ್ರದೇಶಗಳು ಬಹಳವಾಗಿ ಯುರೋಪಿಯನ್ ರಷ್ಯದಲ್ಲಿ ಕಂಡುಬರುತ್ತದೆ. ಈ ಮಣ್ಣನನ್ನು ಚೆರ್ನೋಜೆಮ್ ಎಂದು ಕರೆಯುತ್ತಾರೆ. ಈ ಪ್ರದೇಶ ಜಗತ್ತಿನ ಫಲವತ್ತಾದ ಪ್ರದೇಶಗಳಲ್ಲೊಂದಾಗಿದ್ದು ವಾಣಿಜ್ಯ ಬೇಸಾಯಕ್ಕೆ ತುಂಬಾ ಅನುಕೂಲವಾಗಿದೆ. ಇಲ್ಲಿ ಗೋಧಿ, ಬಾರ್ಲಿ, ರೈ, ಓಟ್ಸ್, ಮುಸುಕಿನ ಜೋಳ, ಸೂರ್ಯಕಾಂತಿ, ಸಿಹಿಗೆಣಸು, ಹೊಗೆಸೊಪ್ಪು ಮುಂತಾದ ಬೆಳೆಗಳನ್ನು ಭಾರಿ ಪ್ರಮಾಣದಲ್ಲಿ ಬೆಳೆಯುತ್ತಾರೆ.
ಪಡ್‍ಜೋಲ್ ಅಥವಾ ಬೂದಿಮಣ್ಣಿನ ಪ್ರದೇಶ ಪ್ರಧಾನವಾಗಿ ಸ್ಕಾಂಡಿನೇವಿಯ ಪರ್ವತಗಳ ಪೂರ್ವ ಭಾಗಗಳಿಂದ ಪೂರ್ವದ ಯೂರಲ್ ಪರ್ವತಗಳವರೆಗೆ ಹರಡಿವೆ. ಸಾಮಾನ್ಯವಾಗಿ ಈ ಪ್ರದೇಶಗಳಲ್ಲಿ ಕೊನಿಫೆರಸ್ ಕಾಡುಗಳು ಬೆಳೆಯುತ್ತವೆ. ನಿರಂತರ ಹಿಮಪದರಗಳಿರುವ ತಂಡ್ರಾ ಪ್ರದೇಶದಲ್ಲಿನ ಜೌಗಿನಿಂದ ಕೂಡಿದ ಪ್ರದೇಶವಿದೆ. ಇಲ್ಲಿನ ಮಣ್ಣಿನ ಮೇಲ್ಪದರ ಕೊಳೆತ ಜೈವಿಕಾಂಶಗಳಿಂದ ಗಟ್ಟಿಯಾಗಿ ಸಸ್ಯಂಗಾರವಾಗಿದೆ.

ಖನಿಜ ಸಂಪತ್ತು: ಕೈಗಾರಿಕೆಗಳ ಅಭಿವೃದ್ಧಿಗೆ ಹಿನ್ನಲೆಯಾಗಿ ಬೇಕಾದ ಶಕ್ತಿ ಉತ್ಪಾದನೆಗೆ ಮೂಲವಸ್ತು ಕಲ್ಲಿದ್ದಲು ಯುರೋಪಿನ ವಿವಿಧ ಕಡೆಗಳಲ್ಲಿ ದೊರೆಯುತ್ತದೆ. ಬ್ರಿಟನ್, ಬೆಲ್ಜಿಯಮ್, ನೆದರ್‍ಲೆಂಡ್, ಫ್ರಾನ್ಸ್, ಜರ್ಮನಿ, ಪೋಲೆಂಡ್, ಚೆಕೊಸ್ಲಾವಾಕಿಯ, ಸ್ಕಾಟ್‍ಲೆಂಡ್, ಬೊಹೆಮಿಯಾ, ಮಾಸ್ಕೊ, ಈ ಪ್ರದೇಶಗಳಲ್ಲಿ ಕಲ್ಲಿದ್ದಲು ಹೆಚ್ಚಾಗಿದ್ದು ಅವುಗಳ ಗಣಿಗಾರಿಕೆ ಒಂದು ದೊಡ್ಡ ಉದ್ಯಮವಾಗಿದೆ. ರಷ್ಯ, ರೊಮೇನಿಯ, ಆಲ್ಬೇನಿಯ ಇವುಗಳನ್ನು ಬಿಟ್ಟು ಉಳಿದೆಡೆ ಪೆಟ್ರೋಲ್ ಮತ್ತು ನೈಸರ್ಗಿಕ ಅನಿಲ ದೊರೆಯುತ್ತದೆ. ಯುರೋಪಿನ ಅನೇಕ ಪ್ರದೇಶಗಳಲ್ಲಿ ಅಣುಸ್ಥಾವರಗಳಿಗೆ ಬೇಕಾದ ಯುರೇನಿಯಂ ದೊರಕುತ್ತದೆ. ಕಬ್ಬಿಣದ ಅದಿರು ಯುರೋಪಿನಲ್ಲಿ ಸಾಕಷ್ಟು ದೊರೆಯುತ್ತದೆ. ರಷ್ಯದ ಕೆಲವಡೆ ಕಬ್ಬಿಣದ ಅದಿರು ನಿಕ್ಷೇಪ ಇತರ ಕಡೆಗಳಿಗಿಂತ ಹೆಚ್ಚಾಗಿ ದೊರಕಿದೆ. ಚಿನ್ನ ಮತ್ತು ಬೆಳ್ಳಿಯ ಉತ್ಪಾದನೆ ಹೆಚ್ಚಿಲ್ಲ. ಇತರ ಲೋಹಗಳೂ ಗೃಹ ನಿರ್ಮಾಣಕ್ಕೆ ಬೇಕಾದ ಸಿಮೆಂಟ್ ಮುಂತಾದವುಗಳ ತಯಾರಿಕೆಗೆ ಬೇಕಾಗುವ ಮೂಲವಸ್ತುಗಳೂ ಇಲ್ಲಿ ದೊರೆಯುವುವು. ತಾಮ್ರ, ಪಾದರಸ, ಪ್ಲಾಟಿನಂ, ಮ್ಯಾಂಗನೀಸ್, ನಿಕ್ಕಲ್, ಜಿûಂಕ್, ಕ್ರೋಮೈಟ್ ಮುಂತಾದ ಲೋಹಗಳೂ ಯುರೋಪಿನಲ್ಲಿ ದೊರೆಯುತ್ತವೆ. 
ಗಣಿಗಾರಿಕೆ ಯುರೋಪಿನ ಎಲ್ಲ ದೇಶಗಳಲ್ಲೂ ಉದ್ಯೋಗ ಒದಗಿಸಿರುವಂತೆ ಇಲ್ಲಿಯ ವಿವಿಧ ಕೈಗಾರಿಕೆಗಳೂ ಜನರಿಗೆ ನಾನಾ ಬಗೆಯ ಉದ್ಯೋಗಗಳನ್ನು ಒದಗಿಸಿವೆ. ಅವುಗಳಲ್ಲಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗಳು ಸೇರಿವೆ. ಜರ್ಮನಿ, ಫ್ರಾನ್ಸ್, ಪೋಲೆಂಡ್ ಮತ್ತು ರಷ್ಯ ಭಾರಿ ಕೈಗಾರಿಕೆಗಳಾದ ಮೋಟಾರು ವಾಹನ ತಯಾರಿಕೆ, ದೊಡ್ಡ ಮತ್ತು ವಿವಿಧೋಪಯೋಗಿ ಭಾರಿ ಯಂತ್ರಗಳು, ಕಬ್ಬಿಣ ಮತ್ತು ಉಕ್ಕಿನ ತಯಾರಿಕೆಯಲ್ಲಿ ಹೆಸರಾಗಿವೆ. ಬೆಲ್ಜಿಯಮ್, ನೆದರ್‍ಲೆಂಡ್, ಸ್ವಿಟ್ಜರ್‍ಲೆಂಡ್, ಇವು ಆಹಾರ ಸಂಸ್ಕರಣೆ ಜವಳಿ ಉದ್ಯಮಗಳಲ್ಲಿ ಮುಂದುವರೆದಿವೆ. ಸ್ವಿಸ್ ಗಡಿಯಾರಗಳು ಜಗತ್ತಿನಲೆಲ್ಲಾ ಜನಪ್ರಿಯವಾದವು. ಯುರೋಪ್ ಹಡಗು ಮತ್ತು ವಿಮಾನ ನಿರ್ಮಾಣಕ್ಕೂ ಹೆಸರಾದಂತೆ ಕರಕುಶಲ ವಸ್ತುಗಳ ತಯಾರಿಕೆಗೂ ಪ್ರಸಿದ್ಧವಾದದ್ದು.
ಸಾರಿಗೆ ಸಂಪರ್ಕ: ಯುರೋಪ್ ಜಗತ್ತಿನಲ್ಲಿಯೇ ಅತ್ಯುತ್ತಮ ಸಂಪರ್ಕ ಮತ್ತು ಸಾಗಾಣಿಕೆಯ ಸೌಕರ್ಯ ಪಡೆದಿರುವ ದೇಶವಾಗಿದೆ. ಉಪಗ್ರಹಗಳ ಸಂಪರ್ಕ ಸೌಲಭ್ಯವುಳ್ಳ ದೂರವಾಣಿ, ದೂರದರ್ಶನ, ಮುಂತಾದವುಗಳ ಜೊತೆಗೆ ಉತ್ತಮ ರಸ್ತೆಗಳಿದ್ದು ಮೋಟರು, ರೈಲು ವ್ಯವಸ್ಥೆ ಜನ ಹಾಗೂ ಸರಕು ಸಾಗಾಣಿಕೆಗೆ ಬಹು ಉಪಯೋಗಿಯಾಗಿದೆ. ಬೆಟ್ಟ, ಪರ್ವತಗಳನ್ನು ಕೊರೆದು ಅನೇಕ ಮೋಟಾರು, ರೈಲುರಸ್ತೆಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಫ್ರಾನ್ಸ್ ಮತ್ತು ಇಟಲಿಯನ್ನು ಸೇರಿಸುವ 11.7 ಕಿಮೀ ಉದ್ದದ ಮೌಂಟ್ ಬ್ಲಾಂಕ್ ಸುರಂಗ, ಇಟಲಿ ಮತ್ತು ಸ್ವಿಟ್ಜರ್‍ಲೆಂಡ್ ಕೂಡಿಸುವ ರೈಲುಮಾರ್ಗದ ಸಿಂಪ್ಲಾನ್‍ಸುರಂಗ 19.8 ಕಿಮೀ ಉದ್ದವಿದೆ ಯುರೋಪ್ ಜಗತ್ತಿನಲ್ಲೇ ಹೆಚ್ಚು ಬಂದರುಗಳನ್ನು ಪಡೆದಿದೆ. ಕಾರಣ ಇದರ ತೀರ ಪ್ರದೇಶದ ಲಕ್ಷಣ. ಹಡಗುಗಳ ಸೌಲಭ್ಯದಿಂದಾಗಿ ಸಮುದ್ರಯಾನ ಹಾಗೂ ಸರಕು ಸಾಗಣೆ ನಿರಂತರ ನಡೆಯುತ್ತಿದೆ. ಇವುಗಳ ಜೊತೆಗೆ ಬಹು ಸುಧಾರಿತ ವಿಮಾನ ಸಂಪರ್ಕವಿದೆ. ಉತ್ತಮ ರಸ್ತೆಗಳು, ನದಿ ಕಾಲುವೆ ಸಂಪರ್ಕ, ರೈಲು, ಮೋಟರು, ಜಹಜು, ವಿಮಾನ ಇತ್ಯಾದಿಗಳಿಂದಾಗಿ ಸಾರಿಗೆ, ಸಂಪರ್ಕ ಸೌಲಭ್ಯಗಳು ಕೈಗಾರಿಕೋದ್ಯಮದ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿವೆ. ಕೈಗಾರಿಕೆಗಳಿಗೆ ಬೇಕಾದ ಕಚ್ಚಾ ವಸ್ತುಗಳನ್ನು ಒದಗಿಸುವುದೂ ಉತ್ಪತ್ತಿಯಾದ, ತಯಾರಾದ ವಸ್ತುಗಳನ್ನು ನಿಗದಿತ ಸ್ಥಾನಗಳಿಗೆ ಮಾರುಕಟ್ಟೆಗಾಗಿ ತಲುಪಿಸುವುದೂ ಯುರೋಪಿನಲ್ಲಿ ಬಹು ಸರಳವಾಗಿದ್ದು ಉದ್ಯಮಿಗಳಿಗೆ ಉತ್ತೇಜನಕಾರಕವಾಗಿದೆ. ಯುರೋಪಿನ ಸಂಪರ್ಕ ಸೌಲಭ್ಯಗಳು ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸಿದ್ದು ಯುರೋಪ್ ಪ್ರವಾಸಿಗಳ ಸ್ವರ್ಗವೆನಿಸಿದೆ. 
ಇತಿಹಾಸ ಮತ್ತು ಸಂಸ್ಕøತಿ : ಯುರೋಪಿನಲ್ಲಿ ಸು. 40,000 ವರ್ಷಗಳಷ್ಟು ಹಿಂದೆಯೇ. ನಿಯಾಂಡರ್‍ತಲ್ ಮನುಷ್ಯ ವಾಸಿಸುತ್ತಿದ್ದ. ಇತಿಹಾಸ ಪೂರ್ಣ ಕಾಲದುದ್ದಕ್ಕೂ ಏಷ್ಯದಿಂದ ಯುರೋಪಿಗೆ ವಲಸೆಗಾರರು ಬಂದು ನೆಲೆಸುತ್ತಿದ್ದರು. ಇವರು ಇಂಡೋ-ಯುರೋಪಿಯನ್ ಗುಂಪಿನ ಕಕೇಷಿಯನ್ ಭಾಷೆಯನ್ನು ಬಳಸುತ್ತಿದ್ದರು. ಇವರ ಕಾಲವನ್ನು ಕಂಚಿನಯುಗವೆಂದು ಕರೆಯುತ್ತಾರೆ. ಕ್ರಿ.ಪೂ. 1700ದ ಹೊತ್ತಿಗೆ ಏಜಿಯನ್ ಸಮುದ್ರದ ಆಸುಪಾಸಿನಲ್ಲಿ ಮೊದಲು ಕೃಷಿ ಮತ್ತು ಪಶುಸಂಗೋಪನೆಗಳು ಕಂಡುಬಂದವು. ದಕ್ಷಿಣ ಬಾಲ್ಕನ್ ಪ್ರದೇಶದಲ್ಲಿ ಕ್ರಿ.ಪೂ. ಸು. 6000 ದ ಹೊತ್ತಿಗೆ ಶಾಶ್ವತ ಮಾನವ ನೆಲೆಗಳು ಸ್ಥಾಪಿತವಾದವು. ಕೇಂದ್ರ ಯುರೋಪಿನಲ್ಲಿ ಕ್ರಿ.ಪೂ. 5000ದಲ್ಲಿ ವ್ಯವಸಾಯ ವಿಸ್ತಾರಗೊಂಡಿತು. ಕ್ರಿ.ಪೂ. 2000ದ ವೇಳೆಗೆ ಐತಿಹಾಸಿಕವಾಗಿ ಮಹತ್ತರವಾದ ಜನಾಂಗಗಳು ರಾಷ್ಟ್ರಗಳೂ ಬೆಳೆಯುವಂತಹ ವಾತಾವರಣ ನಿರ್ಮಾಣವಾಯಿತು. 

ಕ್ರಿ. ಶ. ಸು. 1000ದಲ್ಲಿ ವಿಭಿನ್ನ ಜನಾಂಗಗಳು ಯುರೋಪಿನಲ್ಲಿ ನೆಲೆಗೊಂಡಿತು. ಫ್ರಾನ್ಸ್, ದಕ್ಷಿಣ ಜರ್ಮನಿ ಮತ್ತು ಸುತ್ತಲಿನ ಪ್ರದೇಶದಲ್ಲಿ ಆರಂಭಕಾಲದ ಕೆಲ್ಟ್ ಜನಾಂಗದವರು ವಾಸಿಸುತ್ತಿದ್ದರು ಎಂದು ಅಭಿಪ್ರಾಯಪಡಲಾಗಿದೆ. ಈ ಸಂಸ್ಕøತಿ ಬ್ರಿಟನ್, ಐರ್ಲೆಂಡ್, ಕೇಂದ್ರ ಯುರೋಪ್, ಕಾರ್ಪೆಥಿಯನ್ಸ್ ಮತ್ತು ಬಾಲ್ಕನ್ ಪ್ರದೇಶಗಳಿಗೆ ಹಬ್ಬಿತು. ಜರ್ಮಾನಿಕ್ ಅಥವಾ ಟ್ಯುಟಾನಿಕ್ ಜನಾಂಗದವರ ಮೂಲಗಳ ಬಗೆಗೆ ಸ್ಪಷ್ಟವಾದ ವಿವರಗಳು ದೊರೆತಿಲ್ಲ. ಕಂಚಿನ ಯುಗದ ಕೊನೆಯ ವೇಳೆಗೆ ಅವರು ದಕ್ಷಿಣ ಸ್ವೀಡನ್, ಡೇನಿಷ್, ಪರ್ಯಾಯದ್ವೀಪ್ ಮತ್ತು ಉತ್ತರ ಜರ್ಮನಿಗಳಲ್ಲಿ ಹರಡಿಕೊಂಡಿದ್ದಿರಬಹುದೆಂದು ಅಭಿಪ್ರಾಯಪಡಲಾಗಿದೆ. ಕೆಲ್ಟಿಕ್ ಬುಡಕಟ್ಟುಗಳು ವಾಸಿಸುತ್ತಿದ್ದ ಪ್ರದೇಶಗಳಿಗೂ ಅವರು ಬಂದರು. ಕಪ್ಪು ಸಮುದ್ರದ ವಾಯುವ್ಯ ಭಾಗದಲ್ಲಿ ಕಾರ್ಪೇಥಿಯನ್ ಬೆಟ್ಟಗಳಾಚೆ ಬಾಲ್ಟಿಕ್ ಸಮುದ್ರದವರೆಗಿನ ಹುಲ್ಲುಗಾವಲು ಪ್ರದೇಶದಲ್ಲಿ ಹಲವು ಬುಡಕಟ್ಟಿನ ಜನರು ವಾಸಿಸುತ್ತಿದ್ದರು. ಅವರಲ್ಲಿ ಅಲೆಮಾರಿ ಜನಾಂಗದ ಸಿಥಿಯನ್ನರು ಮುಖ್ಯರು. 
ಗ್ರೀಕ್ ಸಂಸ್ಕøತಿ: ಯುರೋಪಿನಲ್ಲಿ ನಾಗರಿಕತೆಯತ್ತ ದಾಪುಗಾಲು ಹಾಕಿದವರಲ್ಲಿ ಗ್ರೀಕರು ಮೊದಲಿಗರು. ಗ್ರೀಸ್ ದೇಶದ ಮುಖ್ಯ ಭೂಭಾಗದಲ್ಲಿ ಮೈಸಿನಿಯನ್ ಸಂಸ್ಕøತಿ ಕ್ರಿ.ಪೂ. 2000ದಲ್ಲಿ ಅಸ್ತಿತ್ವದಲ್ಲಿತ್ತು. ಆಗ ಮೆಡಿಟರೇನಿಯನ್ ಪ್ರದೇಶದಿಂದ ಗ್ರೀಕರು ಇಂದಿನ ಗ್ರೀಸ್‍ಗೆ ವಲಸೆ ಬಂದರು. ಕ್ರಿ.ಪೂ. 900 ರಿಂದ ಗ್ರೀಕರ ಪ್ರಾಚೀನ ಮೂಲ ಸಂಸ್ಕøತಿಯನ್ನು ಗುರುತಿಸಲಾಗಿದೆ. ಗ್ರೀಕರು ದೂರ ಪ್ರದೇಶಗಳಿಗೆ ಪ್ರವಾಸ ಮಾಡಿ ಏಷ್ಯದ ಹಲವು ಭಾಗಗಳಲ್ಲಿ ವಸಾಹತುಗಳನ್ನು ಸ್ಥಾಪಿಸಿದರು. ಇದರಂತೆ ಕಪ್ಪು ಸಮುದ್ರ, ಇಟಲಿ ಮತ್ತು ಉತ್ತರ ಆಫ್ರಿಕದ ಅನೇಕ ಕಡೆ ಇವರ ಸಾಂಸ್ಕøತಿಕ ನೆಲೆಗಳು ತಲೆಯೆತ್ತಿದವು. ಮಧ್ಯ ಏಷ್ಯದ ಮುಂದುವರೆದ ಸಂಸ್ಕøತಿಗಳೊಡನೆ ಸಂಪರ್ಕವನ್ನು ಹೊಂದಿದ್ದ ಅವರು ಆ ಸಂಸ್ಕøತಿಗಳ ಅನೇಕ ಒಳ್ಳೆಯ ಲಕ್ಷಣಗಳನ್ನು, ವಿಚಾರಗಳನ್ನು ಪಶ್ಚಿಮ ಯುರೋಪಿಗೆ ತಂದು ಪ್ರಸಾರ ಮಾಡಿದರು. ತಮ್ಮದೇ ಆದ ವಿಶಿಷ್ಟ ಕೊಡುಗೆಗಳಿಂದ ಅದರಲ್ಲೂ ತತ್ತ್ವಶಾಸ್ತ್ರ, ಗಣಿತ, ವಿe್ಞÁನ ಮತ್ತು ನಗರ ರಾಜ್ಯಗಳ ಹೊಸ ವಿಚಾರಗಳನ್ನು ಮಂಡಿಸಿ, ಆಚರಣೆಗೆ ತಂದರು. ಸಾಕ್ರಟಿಸ್, ಪ್ಲೇಟೋ, ಅರಿಸ್ಟಾಟಲ್, ಆರ್ಕಿಮಿಡಿಸ್‍ರಂತಹ e್ಞÁನಿಗಳಿಗೆ ಜನ್ಮ ನೀಡಿ ಸಮಗ್ರ ಯುರೋಪಿಯನ್ ಸಂಸ್ಕøತಿಗೆ ಬುನಾದಿ ಹಾಕಿದರು.

ರೋಮನ್ ಸಂಸ್ಕøತಿ: ಕ್ರಿ.ಪೂ. ಎರಡನೆಯ ಶತಮಾನದಲ್ಲಿ ಗ್ರೀಕರು ರೋಮನ್ನರ ಹತೋಟಿಗೆ ಬಂದರು. ಇಟಲಿಯಲ್ಲಿ ಆರಂಭಿಸಿ ಯೂರೋಪಿನಲ್ಲಿ ವಿಸ್ತಾರವಾದ ಸಾಮ್ರಾಜ್ಯವನ್ನು ಕಟ್ಟಿದರು. ಗ್ರೀಕರು ಆರಂಭಿಸಿದ್ದ ಸಂಸ್ಕøತಿ ಪ್ರಸಾರ ಕಾರ್ಯವನ್ನು, ರೋಮನ್ನರು ಮುಂದುವರಿಸಿದ್ದಲ್ಲದೇ, ರಾಜ್ಯ ವ್ಯವಸ್ಥೆ ಮಿಲಿಟರಿ ವ್ಯವಸ್ಥೆ ಮತ್ತು ಕಾನೂನು ಇವುಗಳಲ್ಲಿ ತಮ್ಮದೇ ಆದ ವಿಶಿಷ್ಟವಾದ ಕಾಣಿಕೆಗಳನ್ನು ನೀಡಿದರು. ಹಲವು ಸಂಸ್ಕøತಿಗಳ ಸಮನ್ವಯವನ್ನು ರೋಮನ್ನರು ಸಾಧಿಸಿ, ಶಾಂತಿಯನ್ನು ಸ್ಥಾಪಿಸಿದರು. ಸಾಮ್ರಾಜ್ಯದಲ್ಲೆಲ್ಲ ಮುಕ್ತ ವ್ಯಾಪಾರಕ್ಕೆ ಅವಕಾಶವಿತ್ತು. ರೋಮನ್ ಸಾಮ್ರಾಜ್ಯದಲ್ಲಿ ಕ್ರೈಸ್ತಧರ್ಮ ಉಗಮಗೊಂಡು ಯುರೋಪಿನಲ್ಲಿ ಹರಡಿತು. ಸಾಂಪ್ರದಾಯಿಕ ಗ್ರೀಕೋ-ರೋಮನ್-ಪೇಗನ್ ಸಂಸ್ಕøತಿ ಅವನತಿ ಹೊಂದಿ, ಕ್ರಿಶ್ಚಿಯನ್ ಚರ್ಚ್ ಪ್ರಧಾನ ಶಕ್ತಿಯಾಯಿತು. 

ರೋಮನ್ ಸಾಮ್ರಾಜ್ಯದ ರಾಜಧಾನಿಯನ್ನು ಕಾನ್‍ಸ್ಟಾಂಟಿನೋಪಲ್ ನಗರಕ್ಕೆ ಕ್ರಿ. ಶ. 330ರಲ್ಲಿ ವರ್ಗಾಯಿಸಲಾಯಿತು. ರೋಮನ್ ಚಕ್ರಾಧಿಪತ್ಯ ಪೂರ್ವ ಮತ್ತು ಪಶ್ಚಿಮ ಭಾಗಗಳೆಂದು ಕ್ರಿ.ಶ. 395ರಲ್ಲಿ ಒಡೆಯಿತು. ಎರಡೂ ಭಾಗಗಳು ಅನಾಗರಿಕ ಜನಾಂಗಗಳ ಧಾಳಿಗಳಿಗೆ ತುತ್ತಾದವು. ಪಶ್ಚಿಮದ ಸಾಮ್ರಾಜ್ಯ ಜನಸಂಖ್ಯೆಯಲ್ಲಿನ ಇಳಿತ ಮತ್ತು ಅಧಿಕಾರ ವರ್ಗದವರ ಬಿಗಿಧೋರಣೆಗಳಿಂದ ಕುಂದಿಹೋಯಿತು. ಇದರ ಜೊತೆಗೆ ಪಶ್ಚಿಮ ಮತ್ತು ಪೂರ್ವ ದಿಕ್ಕುಗಳಿಂದ ಧಾವಿಸಿ ಬಂದ ಅನಾಗರಿಕ ಬುಡಕಟ್ಟಿನವರು ಅದರ ಗಡಿಗಳನ್ನು ಹಿಂದಕ್ಕೆ ಸರಿಸುತ್ತ ಸಾಗಿದರು. ಅಟ್ಟಲನ ನಾಯಕತ್ವದಲ್ಲಿ ಕ್ರಿ.ಶ. 451ರಲ್ಲಿ ಹೂಣರು ಪೂರ್ವಭಾಗದ ಸಾಮ್ರಾಜ್ಯಕ್ಕೆ ಮುತ್ತಿಗೆ ಹಾಕಿದರು. ಒಂದೊಂದಾಗಿ ಯುರೋಪಿಯನ್ ಪ್ರದೇಶಗಳು ಅವರ ಅಧೀನವಾದವು. ಬ್ರಿಟನ್ ದೇಶದ ಏಂಜಲ್ಸ್ ಮತ್ತು ಸ್ಯಾಕ್ಷನ್ಸ್‍ಗಳ ಗಾಲ್ ಪ್ರದೇಶ, ವಿಸಿಗಾಥ್ಸ್, ಬರ್ಗಂಡಿಯನ್ಸ್ ಮತ್ತು ಫ್ರಾಕ್ಸ್ ಜನಂಗದವರ, ಇಟಲಿ ಅಸ್ಟ್ರೊಗಾಥ್ಸ್‍ರ ಮತ್ತು ಉತ್ತರ ಆಫ್ರಿಕ್ ವಂಡಾಲರ ಕೈವಶವಾಯಿತು. ಹೀಗೆ ರೋಮನ್ ಸಾಮ್ರಾಜ್ಯ (ನೋಡಿ- ರೋಮನ್-ಸಾಮ್ರಾಜ್ಯ) ನಾಶವಾಗಿ, ಎಲ್ಲೆಲ್ಲೂ ಅಸ್ಥಿರತೆ ಏರ್ಪಟ್ಟರೂ ಕ್ರಿಶ್ಚಿಯನ್ ಚರ್ಚ್ ತನ್ನ ಐಕ್ಯತೆಯನ್ನು ಕಾಪಾಡಿಕೊಂಡಿತು. ಕ್ರಮೇಣ ಹಂತ ಹಂತವಾಗಿ ಅನಾಗರಿಕ ಜನಾಂಗದವರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರು. ಅಂತಿಮವಾಗಿ ಪೋಪ್ ಚಕ್ರಾಧಿಪತಿಯ ಸ್ಥಾನವನ್ನು ಕೊಡುವ ಅಧಿಕಾರ ಪಡೆದುಕೊಂಡ. 6ನೆಯ ಶತಮಾನದಲ್ಲಿ ಲೊಂಬಾರ್ಡರು ಇಟಲಿಯ ಮೇಲೆ ಆಕ್ರಮಣ ಮಾಡಿದರೆ, 8ನೆಯ ಶತಮಾನದಲ್ಲಿ ಮುಸ್ಲಿಮರ ಸ್ಟೆಯಿನ್ ಮತ್ತು ಗಾಲ್‍ಗಳನ್ನು ಆಕ್ರಮಿಸಲು ಯತ್ನಿಸಿದಾಗ ಅವರ ಮುನ್ನುಗ್ಗುವಿಕೆಯನ್ನು ಕ್ರಿ.ಶ. 732ರಲ್ಲಿ ಟೂರ್ಸ್ ಎಂಬಲ್ಲಿ ಚಾಲ್ರ್ಸ್ ಮಾರ್ಟಲ್ ತಡೆದಿದ್ದು ಪ್ರಮುಖ ಘಟನೆ ಆಯಿತು. ಅವನ ಮೊಮ್ಮಗ ಚಾಲ್ರ್ಸ್ ಮೇನ್ ಈ ಕಾರ್ಯವನ್ನು ಜಯಪ್ರದವಾಗಿ ಮುಂದುವರೆಸಿ, ಕೇಂದ್ರ ಯುರೋಪಿನಲ್ಲಿ, ಇಬ್ರೊ ನದಿಯಿಂದ ಡಾನ್ಯೂಬ್‍ವರೆಗೆ ಒಂದು ಸಾಮ್ರಾಜ್ಯವನ್ನು ಸ್ಥಾಪಿಸಿ, ಕ್ರಿ. ಶ. 800ರಲ್ಲಿ ಪೋಪ್ ಮೂರನೆಯ ಲಿಯೋನ ಹಸ್ತದಿಂದ ಕಿರೀಟ ಧಾರಣೆ ಮಾಡಿಕೊಂಡು, ಪವಿತ್ರ ರೋಮನ್ ಚಕ್ರವರ್ತಿ ಎಂಬ ಕೀರ್ತಿಗೆ ಪಾತ್ರನಾದ. ಚಾಲ್ರ್ಸ್‍ಮೇನ್ ಸಾಮ್ರಾಜ್ಯ ಅವನ ಮೊಮ್ಮಕ್ಕಳ ಕಾಲದಲ್ಲಿ ಫ್ರಾನ್ಸ್ ಮತ್ತು ಜರ್ಮನಿ ಎಂದು ವಿಭಜನೆಯಾಯಿತು. ಇಟಲಿ ಸಣ್ಣ ಸಣ್ಣ ಸಂಸ್ಥಾನಗಳಾಗಿ ಒಡೆಯಿತು. 

ಮುಂದಿನ ಶತಮಾನಗಳಲ್ಲಿ ರಾಜರ ಮತ್ತು ಶ್ರೀಮಂತವರ್ಗಗಳ ನಡುವೆ ಘರ್ಷಣೆಗಳು ನಡೆದು, ಯುರೋಪಿಯನ್ ಇತಿಹಾಸ ಅಸ್ಪಷ್ಟ ಯುಗಕ್ಕೆ ಕಾಲಿಟ್ಟಿತು. ಕಾಲಕ್ರಮೇಣ ರಾಜರು ತಮ್ಮ ಅಧಿಕಾರವನ್ನು ಹೆಚ್ಚಿಸಿಕೊಳ್ಳುತ್ತಾ ಹೋದರು; ಶ್ರೀಮಂತ ವರ್ಗದ ಅಧಿಕಾರ ಕುಗ್ಗಿತು. ಇಂಥ ಅರಾಜಕತ್ವದ ಕಾಲದಲ್ಲಿ ಯುರೋಪಿನಲ್ಲಿ ಊಳಿಗಮಾನ್ಯ ಪದ್ಧತಿ ಉಗಮಗೊಂಡು ಸುಮಾರು 500ರವರೆಗೂ ಮುಂದುವರೆಯಿತು. ಈ ಕಾಲದಲ್ಲಿ ಬೈಜಾಂಟೈನ್ ಚರ್ಚ್ ಪೋಪನ್ ಅಧಿಕಾರ ಸಂಬಂಧಗಳಿಂದ ಬೇರ್ಪಟ್ಟಿತು. ಇದರಿಂದ ಯುರೋಪಿನ ಚರ್ಚ್‍ನಲ್ಲಿ ವಿಭಜನೆಯುಂಟಾಗಿ ಅದು ಇಂದಿಗೂ ಮುಂದುವರೆದಿದೆ. ಪ್ಯಾಲಸ್ತೀನ್ ಏಳನೆಯ ಶತಮಾನದಲ್ಲಿ ಮುಸ್ಲಿಮರ ವಶವಾಯಿತು. 11ನೆಯ ಶತಮಾನದಲ್ಲಿ ಸೆಲ್‍ಜುಕ್ ಟರ್ಕರು ಅದನ್ನು ಆಕ್ರಮಿಸಿಕೊಂಡಾಗ ಕ್ರಿಶ್ಚಿಯನ್ ಯಾತ್ರಿಕರಿಗೆ ಪವಿತ್ರ ಸ್ಥಳಗಳಿಗೆ ಹೋಗಿ ಬರಲು ತೊಂದರೆಯುಂಟಾಗಿ ಕ್ರೈಸ್ತರ ಪವಿತ್ರ ಸ್ಥಳಗಳ ವಿಮೋಚನೆಗಾಗಿ ಧರ್ಮಯುದ್ಧ 11ನೆಯ ಶತಮಾನದಿಂದ 13ನೆಯ ಶತಮಾನದವರೆಗೆ ನಡೆಯಿತು. ಈ ಯುದ್ಧಗಳು ಯುರೋಪಿನ ಮೇಲೆ ನಾನಾ ರೀತಿಯ ಪರಿಣಾಮವನ್ನುಂಟುಮಾಡಿದವು. ಕೆಲವು ವೇಳೆ ಅವರಲ್ಲಿ ಐಕ್ಯತೆಯನ್ನು ಸಾಧಿಸಲು ಸಹಾಯಕವಾದರೆ ಮತ್ತೆ ಕೆಲವು ಬಾರಿ ಅವು ರಾಜಕೀಯ ಅಸ್ಥಿರತೆಯನ್ನುಂಟುಮಾಡಿದವು. ಚರ್ಚಿನ ಮತ್ತು ಪೋಪನ ಪ್ರಭಾವ ಹೆಚ್ಚಿತು. ಯುರೋಪಿಗೆ ಅನೇಕ ರೀತಿಯ ಆರ್ಥಿಕ ಲಾಭಗಳುಂಟುಮಾಡಿದವು. ಇಂಗ್ಲೆಂಡ್, ಸ್ಪೇನ್ ಮತ್ತು ಫ್ರಾನ್ಸ್ ರಾಷ್ಟ್ರೀಯತೆಯನ್ನು ರೂಢಿಸಿಕೊಂಡು ಬೆಳೆದವು; ಊಳಿಗಮಾನ್ಯ ವ್ಯವಸ್ಥೆ ದುರ್ಬಲವಾಗತೊಡಗಿತು. 1317-1453ರ ಅವಧಿಯಲ್ಲಿ ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳ ನಡುವೆ ನಡೆದ ನೂರು ವರ್ಷಗಳ ಯುದ್ಧದ ಪರಣಾಮವಾಗಿ ಫ್ರಾನ್ಸಿನಲ್ಲಿ ಐಕ್ಯತೆಯುಂಟಾಯಿತು. 1453ರಲ್ಲಿ ಟರ್ಕರು ಕಾನ್‍ಸ್ಟ್ಯಾಂಟಿನೋಪಲ್ ನಗರವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು ಯುರೋಪಿಯನ್ ಇತಿಹಾಸದಲ್ಲಿ ಪ್ರಮುಖ ಘಟ್ಟವಾಯಿತು. ಅಲ್ಲಿದ್ದ ಗ್ರೀಕ್ ಪಂಡಿತರು ಪಶ್ವಿಮ ಯುರೋಪಿಗೆ, ಮುಖ್ಯವಾಗಿ ಇಟಲಿಯ ವೆನಿಸ್ ಮುಂತಾದ ನಗರಗಳಿಗೆ ಬಂದು ನೆಲಸಿದ್ದರಿಂದ ಅಲ್ಲೆಲ್ಲಾ e್ಞÁನ ಪುನರುಜ್ಜೀವನ ಚಳುವಳಿ ನಡೆದು ಯುರೋಪ್ ಆಧುನಿಕ ಯುಗಕ್ಕೆ ಕಾಲಿಡುವಂತಾಯಿತು. 

ಆಧುನಿಕ ಯುಗದ ಆರಂಭ: ನಾಲ್ಕು ಪ್ರಮುಖ ಘಟನೆಗಳು ಯುರೋಪ್ಯವನ್ನು ಊಳಿಗಮಾನ್ಯ ಕಾಲದಿಂದ ಆಧುನಿಕ ಕಾಲಕ್ಕೆ ಕರೆದೊಯ್ದವು. (1) ಭೌಗೋಳಿಕ ಅನ್ವೇಷಣೆಗಳು (2) ಪುನರುಜ್ಜೀವನ ಚಳವಳಿ (3) ಧಾರ್ಮಿಕ ಸುಧಾರಣೆ (4) ರಾಷ್ಟ್ರೀಯತೆಯ ಆಧಾರದ ಮೇಲೆ ರಾಜ್ಯಗಳ ಉಗಮ 15 ಮತ್ತು 16ನೆಯ ಶತಮಾನಗಳ ಅವಧಿಯಲ್ಲಿ ಅಮೇರಿಕ ಮತ್ತು ಪೌರಸ್ತ್ಯ ದೇಶಗಳಿಗೆ ಸಮುದ್ರ ಮಾರ್ಗ ಕಂಡುಹಿಡಿದು ಹೊಸ ಯುಗ ಆರಂಭವಾಯಿತು. ಪೋರ್ಚುಗೀಸ್ ದೊರೆ ಹೆನ್ರಿ ನ್ಯಾವಿಗೇಟರ್ (1384-1460) ಇಂಥ ಕಾರ್ಯಕ್ಕೆ ಬುನಾದಿ ಹಾಕಿದ. ಬಾರ್ತೊಲೋಮ್ಯೂ ಡಯಾಜ್, ವಾಸ್ಕೋಡಗಾಮ, ಕೋಲಂಬಸ್, ವೆಸ್‍ಪುಸ್ಸಿ ಮತ್ತು ಮೆಗಲ್ಯಾನ್ ಎಂಬ ಸಾಹಸಿ ನಾವಿಕರು ಭೌಗೋಳಿಕ ಅನ್ವೇಷಣೆ ನಡೆಸಿದವರಲ್ಲಿ ಪ್ರಮುಖರು. ಇಂಗ್ಲೆಂಡಿನ ನಾವಿಕರಾದ ಡೇವಿಸ್, ಹಾಕಿನ್ಸ್, ಡ್ರೇಕ್, ಮುಂತಾದವರೂ ಇದಕ್ಕೆ ನೆರವಾದರು. ಇದರ ಪರಿಣಾಮವಾಗಿ ಯುರೋಪ್ ವಸಾಹತುಗಳನ್ನು ಎಲ್ಲೆಡೆ ಸ್ಥಾಪಿಸಿತು. ಪ್ರಾಚೀನ ಗ್ರೀಕ್ ಮತ್ತು ಲ್ಯಾಟಿನ್ ಗ್ರಂಥಗಳ ಪುನಃ ಪರಿಶೀಲನೆಯಿಂದ ಅಥವಾ ಪುನರಭ್ಯಾಸದಿಂದ ನಡೆದ ಚಳವಳಿಯನ್ನು ಪುನರುಜ್ಜೀವನ ಎಂದು ಕರೆಯುತ್ತಾರೆ. ಪುನರುಜ್ಜೀವನ ಯುರೋಪಿನ ಜನರ ಬದುಕಿನ ಎಲ್ಲ ಕ್ಷೇತ್ರಗಳಿಗೂ ಹೊಸತನವನ್ನು ಎಚ್ಚರವನ್ನು ತಂದುಕೊಟ್ಟಿತಲ್ಲದೆ, ಮಧ್ಯಯುಗದಿಂದ ಆಧುನಿಕ ಯುಗಕ್ಕೆ ಪರಿವರ್ತನೆಗೊಳ್ಳಲು ಸಹಾಯಮಾಡಿತು. ಇಟಲಿಯಲ್ಲಿ ಆರಂಭವಾದ ಪುನರುಜ್ಜೀವನ ಚಳವಳಿ ಮುಂದೆ ಇಂಗ್ಲೆಂಡ್, ಫ್ರಾನ್ಸ್, ಸ್ವೀಡನ್, ಮತ್ತು ಜರ್ಮನ್, ದೇಶಗಳಿಗೂ ಹಬ್ಬಿತು. ಧರ್ಮಶಾಸ್ತ್ರದಿಂದ ದೂರಸರಿದು, ಪ್ರಾಚೀನ ಗ್ರೀಕ್, ಮತ್ತು ಲ್ಯಾಟಿನ್ ಕೃತಿಗಳಿಂದ ಸ್ಫೂರ್ತಿ ಪಡೆದ ಮಾನವತಾವಾದಿಗಳಾದ ಸಿಸಿರೋ, ಪೆಟ್ರಿಯಾರ್ಕ್, ಮಾರ್ಟಿನ್ ಲೂಥರ್, ಬೊಕಾಷಿಯೋ, 3ನೆಯ ಪೋಪ್‍ನಿಕೋಲಸ್, ಡಾಂಟೆ, ಸರ್ವಾಂಟಿಸ್, ಮುಂತಾದ ಬುದ್ಧಿಜೀವಿಗಳು ಮಾನವನ ವ್ಯಕ್ತಿತ್ವವನ್ನು ಉತ್ತಮಗೊಳಿಸುವ ದಿಸೆಯಲ್ಲಿ ಕೆಲಸ ಮಾಡಿದರು; ಕೃತಿಗಳನ್ನು ರಚಿಸಿದರು. ಪುನರುಜ್ಜೀವನ ಕಾಲದ ಸಾಹಿತಿಗಳಲ್ಲಿ ಇಂಗ್ಲೆಂಡಿನ ಷೇಕ್‍ಸ್ಪಿಯರ್, ಸ್ಪೇನ್‍ನ ಸರ್ವಾಟಿಸ್, ಮೊದಲಾದವರನ್ನು ಹೆಸರಿಸಬಹುದು. ವಾಸ್ತುಶಿಲ್ಪಕ್ಷೇತ್ರದಲ್ಲಿ ಹೊಸ ಶೈಲಿ ರೂಪುಗೊಂಡು ಅದು ಚರ್ಚು ಮತ್ತು ಇತರ ಸಾರ್ವಜನಿಕ ಕಟ್ಟಡಗಳಲ್ಲಿ ಕಾಣಿಸಿಕೊಂಡಿತು. ಗ್ರೀಕ್ ಮತ್ತು ರೋಮನ್ ಶೈಲಿಯ ಬಾಗಿದ ಕಮಾನುಗಳು ಗ್ರೀಕ್ ದೇವಾಲಯಗಳ ಸರಳವಾದ ಗುಮ್ಮಟಗಳು ರೂಢಿಗೆ ಬಂದವು. ಇಟಲಿಯ ವಿಶ್ವವಿಖ್ಯಾತರಾದ ಲಿಯಾನಾರ್ಡೊ ಡ ವಿಂಚಿ, ಮೈಕೆಲೆಂಜೆಲೋ ಮತ್ತು ರಾಫೆಲ್ ಇವರೆಲ್ಲ ಆ ಕಾಲದವರು. ಲಿಯೊನಾರ್ಡೊ ಡ ವಿಂಚಿಯ ಪ್ರಸಿದ್ಧವಾದ ವರ್ಣಚಿತ್ರ ಮೊನಾಲೀಸಾ ಮತ್ತು ಅಂತಿಮ ಭೋಜನ ಈ ಕಾಲದ್ದು.

ಗೆಲಿಲಿಯೋ, ಕೋಪರ್‍ನಿಕಸ್, ಜಾನ್ ಕಿಪ್ಲರ್ ಮತ್ತು ಐಸಾಕ್ ನ್ಯೂಟನ್ ಈ ಯುಗದ ಪ್ರಸಿದ್ಧ ವಿe್ಞÁನಿಗಳು. ಗೆಲಿಲಿಯೋ ದೂರದರ್ಶಕ ಯಂತ್ರವನ್ನು ಉಪಜ್ಞಿಸಿದ. ಸೂರ್ಯ ವಿಶ್ವದ ಕೇಂದ್ರ. ಅದನ್ನು ಭೂಮಿ ಸುತ್ತುತ್ತಿದೆ ಎಂದು ಕೋಪರ್ನಿಕಸ್ ಪ್ರತಿಪಾದಿಸಿದ. ಜರ್ಮನಿಯ ಜಾನ್ ಯೋಹಾನ್ ಕೆಪ್ಲರ್ ಗಣಿತಾತ್ಮಕ ಖಗೋಳಶಾಸ್ತ್ರಕ್ಕೆ ತಳಹದಿ ಹಾಕಿದ. ಸೂರ್ಯ ಮತ್ತು ಅವನ ಸುತ್ತ ನಿರ್ದಿಷ್ಟ ಪಥದಲ್ಲಿ ಸುತ್ತುವ ಗ್ರಹಗಳನ್ನು ನಿಯಂತ್ರಿಸುತ್ತಿರುವುದು ಗುರುತ್ವಾಕರ್ಷಣೆಯ ನಿಯಮ ಎಂದು ನ್ಯೂಟನ್ ಪ್ರತಿಪಾದಿಸಿದ. ಯೋಹಾನ್ ಗುಟೆನ್‍ಬರ್ಗ್‍ನಿಂದ ಪ್ರಥಮ ಬಾರಿಗೆ ಜರ್ಮನಿಯಲ್ಲಿ ಮುದ್ರಣಾಲಯ ಆರಂಭವಾಯಿತು. ಕಾಕ್ಸ್‍ಟನ್ ಇಂತಹುದೇ ಮುದ್ರಣಾಲಯವನ್ನು ಇಂಗ್ಲೆಂಡಿನಲ್ಲಿ ಸ್ಥಾಪಿಸಿದ. ಯುರೋಪಿನ ನಾಗರಿಕತೆ ಮತ್ತು ಸಂಸ್ಕøತಿಯ ಬೆಳವಣಿಗೆಯ ಇತಿಹಾಸದಲ್ಲಿ ಮುದ್ರಣಾಲಯ ಮಹತ್ತರ ಪಾತ್ರವಹಿಸಿತು. ನಾವಿಕರ ದಿಕ್ಸೂಚಿ ಮತ್ತು ಸಿಡಿಮದ್ದನ್ನು ಸಿದ್ಧಪಡಿಸಿದುದು ಇದೇ ಕಾಲದಲ್ಲಿ. ಸಿಡಿಮದ್ದು ಕಂಡುಹಿಡಿದುದು ಯುದ್ಧ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಉಂಟುಮಾಡಿತು. ಹೀಗೆ ಪುನರುಜ್ಜೀವನ ಯುರೋಪಿನ ಜೀವನದ ಎಲ್ಲ ಕ್ಷೇತ್ರಗಳಲ್ಲಿ ಮಹಾನ್ ಬದಲಾವಣೆಗಳನ್ನು ಮೂಡಿಸಿತು. ಧಾರ್ಮಿಕ ಕ್ಷೇತ್ರದಲ್ಲಿ ಮಾರ್ಟಿನ್ ಲೂಥರ್ (1483-1546) ಪೋಪ್ ಮತ್ತು ಚರ್ಚಿನ ವಿರುದ್ಧ ಚಳುವಳಿಯನ್ನು ನಡೆಸಿ ಯುರೋಪಿನಲ್ಲಿ ಪ್ರಾಟೆಸ್ಟೆಂಟ್ ಮತದ ಸ್ಥಾಪನೆಗೆ ಕಾರಣವಾದ.  ಬೈಬಲ್ ಗ್ರಂಥ ಜರ್ಮನ್ ಮತ್ತು ಯುರೋಪಿಯನ್ ಭಾಷೆಗಳಿಗೆ ತರ್ಜುಮೆಗೊಂಡಿತು. ಧಾರ್ಮಿಕ ಚಳುವಳಿಯ ಪರಿಣಾಮವಾಗಿ ಯುರೋಪಿನಲ್ಲಿ ಕ್ರೈಸ್ತಧರ್ಮ ಪ್ರಾಟೆಸ್ಟೆಂಟ್ ಮತ್ತು ಕ್ಯಾಥೊಲಿಕ್ ಎಂಬ ಎರಡು ವಿರುದ್ಧ ಬಣಗಳಾದವು. ಇಂಗ್ಲೆಂಡ್, ನಾರ್ವೆ, ಸ್ವೀಡನ್, ಡೆನ್ಮಾರ್ಕ್ ಮತ್ತು ಉತ್ತರ ಜರ್ಮನಿ ಪ್ರಮುಖ ಪ್ರಾಟೆಸ್ಟೆಂಟ್ ರಾಷ್ಟ್ರಗಳಾದರೆ, ಇಟಲಿ, ಆಸ್ಟ್ರಿಯ ಮತ್ತು ದಕ್ಷಿಣ ಜರ್ಮನಿ ಪ್ರಮುಖ ಕ್ಯಾಥೊಲಿಕ್ ರಾಜ್ಯಗಳಾದವು. ಇಂಥ ಪರಿಸ್ಥಿತಿಯಲ್ಲಿ ಕ್ಯಾಥೊಲಿಕ್‍ರನ್ನು ಪ್ರಾಟೆಸ್ಟೆಂಟ್‍ರ ದೇಶಗಳಲ್ಲೂ ಪ್ರಾಟೆಸ್ಟಂಟರನ್ನು ಕ್ಯಾಥೊಲಿಕ್ ದೇಶಗಳಲ್ಲೂ ಹಿಂಸಿಸತೊಡಗಿದರು. ಪ್ರಾಟೆಸ್ಟೆಂಟ್‍ರ ಪಾಬಲ್ಯವನ್ನು ತಡೆಯಲು ಕ್ಯಾಥೊಲಿಕ್‍ರು ತಮ್ಮ ಚಿರ್ಚಿನಲ್ಲಿ ಪ್ರತಿ ಸುಧಾರಣೆಯನ್ನು 1145ರ ಟ್ರೆಂಟ್ ಸಭೆಯ ಗೊತ್ತುವಳಿಗೆ ಅನುಸಾರವಾಗಿ ನಡೆಸಿದರು. ಪೋಪ್ ಮತ್ತು ಪುರೋಹಿತ ವರ್ಗದವರು ಹೇಗೆ ನಡೆದುಕೊಳ್ಳಬೇಕೆಂದು ಸೂತ್ರಗಳನ್ನು ತಯಾರಿಸಲಾಯಿತು. ಸಂತ ಇಗ್ನೇಷಿಯನ್ ಲಯೊಲನ ಸೊಸೈಟಿ ಆಫ್ ಜೀಸಸ್ ಸಂಘದ ಜೆಸೂಯಿಟರು ಈ ದಿಸೆಯಲ್ಲಿ ಮಹತ್ತರ ಕಾರ್ಯವನ್ನು ಮಾಡಿದರು. (1534) ಕೊನೆಯದಾಗಿ ಪುನರುಜ್ಜೀವನ ಚಳುವಳಿಯಿಂದಾಗಿ ರಾಷ್ಟ್ರೀಯ ಪ್ರಜ್ಞೆ ಅನೇಕ ಯುರೋಪಿಯನ್ ಜನಾಂಗದವರಲ್ಲಿ ಮೂಡಿತು. ಒಂದೇ ಭಾಷೆಗೆ ಸೇರಿದ ಜನಾಂಗದವರು ರಾಷ್ಟ್ರೀಯ ಪ್ರಜ್ಞೆಯುಳ್ಳ ಅರಸರಿಗೆ ಬೆಂಬಲವಾಗಿ ನಿಂತರು. ಇಂತಹ ರಾಷ್ಟ್ರೀಯ ಅರಸರ ಅಧೀನದಲ್ಲಿ ಅಭಿವೃದ್ಧಿಗೆ ಬಂದ ಪ್ರಮುಖ ರಾಷ್ಟ್ರಗಳೆಂದರೆ ಇಂಗ್ಲೆಂಡ್, ಫ್ರಾನ್ಸ್ ಮತ್ತು ಸ್ಪೇನ್. ಹೀಗೆ 15-16ನೆಯ ಶತಮಾನಗಳಲ್ಲಿ ಯುರೋಪ್ ಆಧುನಿಕತೆಗೆ ಕಾಲಿಟ್ಟಿತು.										
(ಎಸ್.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ